ಬೆಂಗಳೂರು:ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸರ್ಕಾರದ ಸ್ವತ್ತಿನ 35.5 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರಗಳನ್ನು ಬಳಕೆ ಮಾಡಲಾಗುತ್ತಿದೆ.
ಸೋಂಕಿನಿಂದ ಮೃತಪಟ್ಟವರನ್ನು ಸಾಮಾನ್ಯ ಸ್ಮಶಾನ ಗಳಲ್ಲಿ ಅಂತ್ಯಕ್ರಿಯೆ ಮಾಡಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಗೋಮಾಳ ಜಮೀನುಗಳಲ್ಲಿ ಮೃತರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ವಾರದ ಹಿಂದೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ನಾಲ್ಕು ತಾಲೂಕುಗಳಲ್ಲಿ 35 ಎಕರೆ 18 ಗುಂಟೆ ಜಮೀನನ್ನು ಗುರುತಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಗಿಡ್ಡನಹಳ್ಳಿಯಲ್ಲಿ 4 ಎಕರೆ, ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗುಳಿಕಮಲೆಯಲ್ಲಿ 8, ಸೋಮನಹಳ್ಳಿಯಲ್ಲಿ 1.18, ತಾವರೆಕೆರೆ ಹೋಬಳಿಯಲ್ಲಿ 5, ಆನೇಕಲ್ ತಾಲೂಕಿನ ಗಿಡ್ಡನಹಳ್ಳಿಯಲ್ಲಿ 3, ಯಲಹಂಕ ತಾಲೂಕಿನ ಜಾಲ ಹೋಬಳಿಯ ಎಂ. ಹೊಸಹಳ್ಳಿಯಲ್ಲಿ 2, ಮಾರೇನಹಳ್ಳಿಯಲ್ಲಿ 5, ಹೆಸರಘಟ್ಟ ಹೋಬಳಿಯ ಮಾವಳ್ಳಿಪುರದಲ್ಲಿ 5 ಹಾಗೂ ಹುತ್ತನಹಳ್ಳಿಯಲ್ಲಿ ಎರಡು ಎಕರೆ ಸ್ಥಳವನ್ನು ಸ್ಮಶಾನಕ್ಕೆ ನಿಗದಿಗೊಳಿಸಲಾಗಿದೆ.
ಜಿಲ್ಲಾಡಳಿತದಿಂದ ಗುರುತಿಸಿದ ಜಮೀನಿನ ಗಡಿಗೆ ತಂತಿಬೇಲಿ ಹಾಕಿ ಒತ್ತುವರಿಯಾಗದಂತೆ ರಕ್ಷಣೆ ಮಾಡಿ ಸ್ಮಶಾನಕ್ಕಾಗಿ ಬಳಸಲು ಸಂಬಂಧಿಸಿದ ತಾಲೂಕುಗಳ ತಹಸೀಲ್ದಾರ್ರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ಈ ಜಮೀನುಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೆ ತೀರ್ಪಿಗೆ ಒಳಪಟ್ಟಿರುತ್ತದೆ ಎಂದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 12 ವಿದ್ಯುತ್ ಚಿತಾಗಾರಗಳಲ್ಲಿ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಮೃತರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಕೆಲವು ಶವಗಳನ್ನು ಆಯಾ ಸಮುದಾಯದ ಪದ್ಧತಿಗಳಂತೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ತಿಳಿಸಿದ್ದಾರೆ. ಕರೊನಾ ಚಿಕಿತ್ಸೆಗೆಂದೇ ವಿಕ್ಟೋರಿಯಾ, ಬೌರಿಂಗ್ ಸೇರಿ ಹಲವು ಸರ್ಕಾರಿ ಆಸ್ಪತ್ರೆಗಳನ್ನು ನಿಗದಿಪಡಿಸಲಾಗಿರುವಂತೆ, ಮೃತರ ಅಂತ್ಯಸಂಸ್ಕಾರಕ್ಕೆಂದೇ ಒಂದೆರಡು ವಿದ್ಯುತ್ ಚಿತಾಗಾರಗಳನ್ನು ಮೀಸಲಿಟ್ಟರೆ ಉತ್ತಮ ಎಂದು ಸಾರ್ವಜನಿಕರು ಬಿಬಿಎಂಪಿಗೆ ಒತ್ತಾಯಿಸುತ್ತಿದ್ದಾರೆ.