ಮಂಗಳೂರು: ಕೊರೋನಾ ರೋಗ ಹರಡುತ್ತಿರುವ ವೇಗ ಬಹಳ ಅಪಾಯಕಾರಿಯಾಗಿದೆ. ಈ ರೋಗದ ಬಗ್ಗೆ ಜನರು ಭಯ ಪಡುವ ಬದಲು ಸದಾ ಜಾಗ್ರತೆ ವಹಿಸಬೇಕು. ಸಾಮಾಜಿಕ ಅಂತರ, ವೈಯಕ್ತಿಕ ಪ್ರತ್ಯೇಕತೆ ಕಾಯ್ದುಕೊಂಡು, ಮಾಸ್ಕ್ ಧರಿಸಿ ರೋಗದಿಂದ ಮುಕ್ತರಾಗಿ ಬದುಕಿನಲ್ಲಿ ಶಾಂತಿ, ನೆಮ್ಮದಿ ಹೊಂದಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಕೊರೋನಾ ಬಗ್ಗೆ ಅರಿವಿರಲಿ. ಭಯ ಬೇಡ, ಮೊದಲೇ ಪರೀಕ್ಷೆ ಮಾಡಿಸಿ. ಚಿಕಿತ್ಸೆ ಪಡೆದು, ಹುಶಾರಾಗಿರಿ. ಕೊರೋನಾ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ತಡ ಮಾಡಿದಷ್ಟೂ ಅಪಾಯಕಾರಿ. ನಿಮಗೆ ಕೊರೋನ ಸೋಂಕಿನ ಸ್ವಲ್ಪ ಲಕ್ಷಣಗಳು ಕಂಡು ಬಂದರೂ ಮನೆಯವರು ಮತ್ತು ಬೇರೆಯವರಿಂದ ದೂರವಿರಿ. ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ, ಜ್ವರ, ಕೆಮ್ಮು, ನೆಗಡಿ, ಗಂಟಲಿನ ತೊಂದರೆ, ನಿತ್ರಾಣ, ಮೈಕೈ ನೋವು, ವಾಸನೆ ಗೊತ್ತಾಗದಿರುವುದು, ರುಚಿಸದಿರುವುದು, ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣವೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.
ಕೊರೋನ ಪರೀಕ್ಷೆ ಸರಳ ಹಾಗೂ ರಾಜ್ಯ ಸರಕಾರದ ವತಿಯಿಂದ ಉಚಿತ. ಪರೀಕ್ಷೆ ಮಾಡಿಸಿ, ವೈದ್ಯರ ಸಲಹೆಯನ್ನು ಪಾಲಿಸಿ. ನಿಮ್ಮ ಕುಟುಂಬ ಮತ್ತು ನಿಮ್ಮ ಹತ್ತಿರದವರನ್ನು ರಕ್ಷಿಸಿ. ನಮ್ಮ ಹೋರಾಟವೇನಿದ್ದರೂ ಕೇವಲ ಕೊರೋನ ಸೋಂಕಿನ ವಿರುದ್ಧ, ಸೋಂಕಿತರ ವಿರುದ್ಧ ಅಲ್ಲ. ಸೋಂಕಿತರನ್ನು ಕಳಂಕಿತರನ್ನಾಗಿ ನೋಡಬೇಡಿ. ಸುರಕ್ಷಿತವಾಗಿರಿ. ನಾವೆಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ. ಕೊರೋನ ವಿರುದ್ಧ ಹೋರಾಡುತ್ತಿರುವ ಕರ್ನಾಟಕ ಸರಕಾರ ಮತ್ತು ಕೊರೋನ ಯೋಧರನ್ನು ನಾವು ಹೃತ್ಪೂರ್ವಕವಾಗಿ ಬೆಂಬಲಿಸೋಣ ಎಂದು ಪ್ರಕಟಣೆಯಲ್ಲಿ ಸ್ವಾಮೀಜಿ ತಿಳಿಸಿದ್ದಾರೆ.