ಕಾಸರಗೋಡು: ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಸ್ ಟಿಕೆಟ್ ದರವನ್ನು ಶೇಕಡಾ 50ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮಂಗಳವಾರದಿಂದ ಜಾರಿಗೆ ಬಂದಿದೆ.
ಸಾಮಾನ್ಯ ಬಸ್ಗಳಲ್ಲಿ ಕನಿಷ್ಠ ದರವನ್ನು 8 ರಿಂದ 12 ರೂ.ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ಪ್ರತಿ ಕಿಲೋ ಮೀಟರ್ ಗೆ ಸಾಮಾನ್ಯ ಬಸ್ಗಳಲ್ಲಿ 70 ಪೈಸೆಯಿದ್ದು, ಇದನ್ನು 1.10ರೂ.ಗೆ ಏರಿಸಲಾಗಿದೆ.
ಪ್ರಯಾಣ ರಿಯಾಯಿತಿ ಪಾಸ್ ಹೊಂದಿದವರೂ ಏರಿಕೆಯಾದ ಮೊತ್ತದ ಅರ್ಧ ಮೊತ್ತ ನೀಡಬೇಕಾಗಿದೆ. ಬೋಟ್ ಪ್ರಯಾಣ ದರವನ್ನು ಶೇಕಡಾ 33ರಷ್ಟು ಹೆಚ್ಚಿಸಲಾಗುವುದು. ನಾಲ್ಕನೇ ಹಂತದ ಲಾಕ್ ಡೌನ್ ಕಾಲಾವಧಿಯಲ್ಲಿ ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಜಲಸಾರಿಗೆಯನ್ನೂ ಪುನಾರಂಭಿಸಲಾಗುವುದು.
ಬಸ್ ಗಳಲ್ಲಿ ಒಟ್ಟು ಸೀಟಿನ ಶೇಕಡಾ 50ರಷ್ಟು ಮಂದಿ ಪ್ರಯಾಣಿಕರನ್ನು ಕೊಂಡೊಯ್ಯಲು ಮಾತ್ರ ಅನುಮತಿ ನೀಡಲಾಗಿದೆ. ಈ ಮಧ್ಯೆ ಅಂತಾರಾಜ್ಯ ಸಂಚಾರದ ಸಾರಿಗೆ ವ್ಯವಸ್ಥೆ ಪುನಾರಂಭ ವಿಳಂಬಗೊಳ್ಳುವುದು ಎಂದು ಕೇರಳ ಸರ್ಕಾರ ತಿಳಿಸಿದೆ.