ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳು ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಪಂಚತಾರಾ ಹೊಟೇಲ್ ಗಳನ್ನು ವಶಕ್ಕೆ ಪಡೆಯಬೇಕೆಂದು ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ರವಾನಿಸಿರುವ ಎಚ್.ಕೆ.ಪಾಟೀಲ್, ಈಗಿರುವ ಹಾಸಿಗೆ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ 5 ಸ್ಟಾರ್ ಹಾಗೂ 3 ಸ್ಟಾರ್ ಹೋಟೆಲ್ಗಳನ್ನು ವಶಕ್ಕೆ ಪಡಿಯಿರಿ ಈ ಮೂಲಕ ಪರಿಣಾಮಕಾರಿಯಾದ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬೆಡ್ ಕೊರತೆ ಎದುರಾಗಿರುವ ಸಂಕಷ್ಟದ ಸಂದರ್ಭದಲ್ಲಿ ರಾಜ್ಯಾದ್ಯಂತ ಇರುವ ಪಂಚತಾರಾ ಆಸ್ಪತ್ರೆಗಳು ಹಾಗೂ ಹೋಟೆಲ್ಗಳನ್ನು ಸರ್ಕಾರ ಆದೇಶ ಅಥವಾ ಸುಗ್ರೀವಾಜ್ಞೆಯ ಮೂಲಕ ತಕ್ಷಣವೇ ತನ್ನ ವಶಕ್ಕೆ ಪಡೆದುಕೊಂಡು ಆಡಳಿತಾಧಿಕಾರಿಗಳನ್ನು ನೇಮಿಸಬೇಕು.
ಇವುಗಳನ್ನು ಕೊರೋನಾ ಚಿಕಿತ್ಸಾ ಕೇಂದ್ರ ಅಥವಾ ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸರ್ಕಾರದಿಂದ ಕೋವಿಡ್ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ದರವನ್ನು ನಿಗದಿ ಮಾಡಲಾಗಿದೆ. ಆದರೆ ಆಸ್ಪತ್ರೆಗಳು ಈ ದರವನ್ನು ಒಪ್ಪಿಕೊಂಡಿಲ್ಲ. ತಕ್ಷಣವೇ ಭಾರತೀಯ ವೈದ್ಯ ಸಂಘದ ಜೊತೆಗೆ ಸಭೆ ಏರ್ಪಡಿಸಿ ಸಮಸ್ಯೆ ಬಗೆಹರಿಸುವಂತೆಯೂ ಎಚ್.ಕೆ.ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.