Saturday, July 2, 2022

Latest Posts

ಕೊರೋನಾ ಚಿಕಿತ್ಸೆಗೆ ಸಿದ್ಧವಾದ ವೆನ್ಲಾಕ್ : ಮೂರನೇ ಮಹಡಿ ಕೊರೋನಾ ಶಂಕಿತರಿಗೆ ಮೀಸಲು

ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿರುವ ಕೊರೋನಾ ವಿರುದ್ಧದ ಹೋರಾಟ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಸೋಂಕಿಗೆ ಅಂತ್ಯ ಹಾಡಲು ಜಿಲ್ಲಾಡಳಿತ ಅವಿರತ ಶ್ರಮಿಸುತ್ತಿದೆ. ವಾರದ ಹಿಂದೆಯಷ್ಟೇ ಇಲ್ಲಿನ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬದಲಿಸಲಾಗಿತ್ತು. ಇದೀಗ ವೆನ್ಲಾಕ್‌ನ ಹೊಸ ಕಟ್ಟಡ ಕೂಡ ಕೊರೋನಾ ಚಿಕಿತ್ಸೆಗಾಗಿ ಸಿದ್ಧಗೊಂಡಿದೆ.
ಈ ಹೊಸ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಕೊರೋನಾ ಶಂಕಿತ ಹಾಗೂ ಸೋಂಕಿತರ ತಪಾಸಣೆಗಾಗಿ ಮೀಸಲಿರಿಸಲಾಗಿದೆ. ಸೋಮವಾರ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ಶಂಕಿತ ಅಥವಾ ಸೋಂಕಿತ ರೋಗಿಗಳನ್ನು ಯಾವ ರೀತಿಯಲ್ಲಿ ಉಪಚರಿಸಲಾಗುತ್ತದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.
ಸದ್ಯ ಸೋಂಕಿತರು ಹಾಗೂ ಶಂಕಿತ ರೋಗಿಗಳು ಆಸ್ಪತ್ರೆಯ ಆಯುಷ್ ಬ್ಲಾಕ್‌ನಲ್ಲಿ ನಿಗಾದಲ್ಲಿದ್ದಾರೆ. ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ನೂತನ ಕೋವಿಡ್ ಬ್ಲಾಕ್‌ನ ೩ನೆ ಮಹಡಿಯನ್ನು ಸಂಪೂರ್ಣವಾಗಿ ಕೊರೋನಾ ಶಂಕಿತ ರೋಗಿಗಳಿಗೆ ಮೀಸಲಿರಿಸಲಾಗಿದೆ. ಇಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟು ೭೯ ಹಾಸಿಗೆಗಳಿವೆ. ಪ್ರತಿ ವಿಭಾಗದಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಗೆ ಡಾನ್ನಿಂಗ್ ಹಾಗೂ ಡಾಪ್ಪಿಂಗ್ ರೂಂ (ರೋಗಿಯ ಬಳಿ ತೆರಳುವಾಗ ಹಾಕಬೇಕಾದ ಉಡುಪುಗಳನ್ನು ಹಾಕಿಕೊಳ್ಳಲು ಹಾಗೂ ತೆಗೆಯಲು ಪ್ರತ್ಯೇಕವಾದ ಕೊಠಡಿ)ಗಳಿವೆ. ಜತೆಯಲ್ಲೇ ಶಂಕಿತ ರೋಗಿಯ ಗಂಟಲ ದ್ರವ ಸಂಗ್ರಹಕ್ಕೂ ಪ್ರತ್ಯೇಕ ಸುಸಜ್ಜಿತ ಕೊಠಡಿ ಇದೆ. ಶಂಕಿತ ರೋಗಿಗಳು ವರದಿ ಪಾಸಿಟಿವ್ ಬಂದಲ್ಲಿ ಅವರನ್ನು ೨ನೆಯ ಮಹಡಿಯಲ್ಲಿರುವ ಪಾಸಿಟಿವ್ ರೋಗಿಗಳ ವಿಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಒಟ್ಟು ೯೯ ಹಾಸಿಗೆಗಳಿವೆ. ಇನ್ನು ಈ ಸೋಂಕಿತರಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು ೧ನೆ ಮಹಡಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ೪೯ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ದ್ವಿತೀಯ ಮತ್ತು ತೃತೀಯ ಮಹಡಿ (ಶಂಕಿತರು ಹಾಗೂ ಪಾಸಿಟಿವ್ ರೋಗಿಗಳನ್ನು ಇರಿಸಲಾಗಿರುವ ವಿಭಾಗ)ಗಳಿಗೆ ತೆರಳಬೇಕಾದರೆ ಪ್ರತ್ಯೇಕ ಲಿಸ್ಟ್‌ಗಳನ್ನು ಮೀಸಲಿಡಲಾಗಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಎಂಸಿಯ ೫೦ ಮಂದಿ, ಎನ್‌ಎಚ್‌ಎಂನ ೪೪ ಹಾಗೂ ೧೩೬ ಸರಕಾರಿ ದಾದಿಯರು ಕರ್ತವ್ಯದಲ್ಲಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ದಾದಿಯೊಬ್ಬರು ಮಾಹಿತಿ ನೀಡಿದರು.
ಸ್ಯಾನಿಟೈಸರ್, ಮಾಸ್ಕ್ ವಿತರಣೆ
ಆಸ್ಪತ್ರೆಯ ಹೊರ ಆವರಣದಲ್ಲಿ ಶಾಮಿಯಾನ ಹಾಕಿ ಶಂಕಿತ ಅಥವಾ ಸೋಂಕಿತರು ಬಂದಾಗ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಆಸನಗಳನ್ನು ಹಾಕಲಾಗಿದೆ. ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸುವ ರೋಗಿಗೆ ಸ್ಯಾನಿಟೈಸರ್ ನೀಡಲಾಗುತ್ತದೆ. ಅಲ್ಲಿ ಮಾಸ್ಕ್ ಕೂಡಾ ಒದಗಿಸಲಾಗುತ್ತದೆ. ಬಳಿಕ ನೋಂದಣಿ ಕಚೇರಿಯಲ್ಲಿ ಆತನ ಸಂಪೂರ್ಣ ವಿವರವನ್ನು ಪಡೆಯಲಾಗುತ್ತದೆ. ಅಲ್ಲಿಂದ ಆತನಿಗೆ ವೇಯ್ಟಿಂಗ್ ಏರಿಯಾದಲ್ಲಿ ಕುಳ್ಳಿರಿಸಲಾಗುತ್ತದೆ. ಬಳಿಕ ಆಸ್ಪತ್ರೆಯ ಒಳಗಿನಿಂದ ಸಹಾಯಕರು ಬಂದು ರೋಗಿಯನ್ನು ಆತನ ವಿವರಗಳುಳ್ಳ ದಾಖಲಾತಿಯೊಂದಿಗೆ ಆತನನ್ನು ಆಸ್ಪತ್ರೆಯ ಒಳಗಿನ ಪ್ರತ್ಯೇಕ ಫ್ಲೂ ಕ್ಲಿನಿಕ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ರೋಗಿಯನ್ನು ಸ್ಕ್ರೀನಿಂಗ್‌ಗೊಳಪಡಿಸಿ ೩ನೆ ಮಹಡಿಗೆ ಕೊಂಡೊಯ್ಯಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಪ್ರಾತ್ಯಕ್ಷಿಕೆಯೊಂದಿಗೆ ವಿವರ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss