Wednesday, July 6, 2022

Latest Posts

ಕೊರೋನಾ ಜಾಗತಿಕ ತುಮುಲ: ಭಾರತ ನಡೆಸುತ್ತಿದೆ ದಿಟ್ಟ ಸಮರ

-ಪ್ರಕಾಶ್ ಇಳಂತಿಲ

ಮೊದಲಾಗಿ ಗಮನಿಸಿ ಭಾರತವು, ಕೊರೋನಾ ಜನಕ ಚೀನಾದೊಂದಿಗೆ 3,488 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಇಷ್ಟಾಗಿಯೂ ಭಾರತದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರು ಕೇವಲ ಇಬ್ಬರು. 81 ಪ್ರಕರಣಗಳು ವರದಿಯಾಗಿವೆ. ಬ್ರಿಟನ್‌ ನಲ್ಲಿ ಎಂಟು ಸಾವು ಮತ್ತು 596 ಪ್ರಕರಣಗಳು ವರದಿಯಾಗಿರುವುದನ್ನು ಗಮನಿಸಬೇಕು.

ತನ್ನ ನಾಗರಿಕರನ್ನು ಆರುಪಟ್ಟು ಸಂಖ್ಯೆಯಲ್ಲಿ ವಿಶ್ವದ ವಿವಿಧ ದೇಶಗಳಿಂದ ರಕ್ಷಿಸಿ ಕರೆತರುತ್ತಿರುವ ವಿಶ್ವದ ಏಕೈಕ ದೇಶ ಭಾರತ. ಇದಿಷ್ಟೇ ಅಲ್ಲದೆ, ಅನೇಕ ವಿದೇಶಿ ನಾಗರಿಕರನ್ನು ತೆರವುಗೊಳಿಸಿ ಅವರ ದೇಶಕ್ಕೆ ಕಳುಹಿಸಿಕೊಟ್ಟಿರುವ ದೇಶವೂ ಭಾರತವೊಂದೇ. ಭಾರತೀಯ ವಾಯುಪಡೆಯು ಒಟ್ಟು 723 ಭಾರತೀಯರು, 37 ವಿದೇಶಿ ರಾಷ್ಟ್ರೀಯರನ್ನು ಚೀನಾದ ವುಹಾನ್‌ ನಿಂದ ರಕ್ಷಿಸಿ ಅಲ್ಲಿಂದ ತೆರವುಗೊಳಿಸಿದೆ. ಜಪಾನ್‌ ನಿಂದ ನಾವು ತೆರವುಗೊಳಿಸಿದವರಲ್ಲಿ 119 ಮಂದಿ ಭಾರತೀಯರು ಮತ್ತು ಐವರು ವಿದೇಶಿಯರು. ಕೊರೋನಾ ಪೀಡಿತ ಇರಾನ್‌ ನಲ್ಲಿ ತಮ್ಮ ಧಾರ್ಮಿಕ ಯಾತ್ರೆ ಕೈಗೊಂಡ ವೇಳೆ ಅಲ್ಲಿ ಸಿಲುಕಿಕೊಂಡ 58 ಮಂದಿ ಭಾರತೀಯರನ್ನು ರಕ್ಷಿಸಿರುವುದೂ ನಮ್ಮ ಭಾರತೀಯ ವಾಯುಪಡೆಯೇ. ಅಂದರೆ ಸುಮಾರು 900 ಮಂದಿ ಭಾರತೀಯರು ಮತ್ತು 48 ಮಂದಿ ವಿದೇಶಿಯರನ್ನು ರಕ್ಷಿಸಿದ ಮಾನವೀಯ ಬದ್ಧತೆ ನಮ್ಮದು.

COVID-19ರ ವಿರುದ್ಧ ದಿಟ್ಟ ಸಮರ ನಡೆಸುತ್ತಿರುವ ಭಾರತ ಚೀನಾ ಸಹಿತವಾಗಿ ತನ್ನ ನೆರೆಯ ದೇಶಗಳಿಗೆ ರಾಜತಾಂತ್ರಿಕ, ಮಾನವೀಯ ಮತ್ತು ವೈದ್ಯಕೀಯ ನೆರವಿನ ಕೊಡುಗೆ ನೀಡಿ ಮಾನವೀಯತೆಯನ್ನು ಮೆರೆದಿದೆ.

ಭಾರತ ದಾಖಲೆಯ ಅವಧಿಯಲ್ಲಿ ಒಟ್ಟು 56 ವೈರಸ್ ಸಂಶೋಧನಾ ಪತ್ತೆ ಪ್ರಯೋಗಾಲಯ (VRDL) ಗಳನ್ನು ಸ್ಥಾಪಿಸಿದ್ದು, ಈ ಮೂಲಕ ತನ್ನ ನಾಗರಿಕರರು ಮತ್ತು ವಿದೇಶಿ ನಾಗರಿಕರಿಗೆ ನೆರವಾಗುತ್ತಿದೆ. ಅಷ್ಟೇ ಅಲ್ಲ, ಮುಂದಿನ ತಿಂಗಳಲ್ಲೇ ಇಂತಹ ಇನ್ನೂ 56 ಪ್ರಯೋಗಾಲಯಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ದುರದೃಷ್ಟವಶಾತ್ ಇದಾವುದೂ ಕೊರೋನಾ ಭೀತಿ ಹರಡುತ್ತಿರುವ ನಮ್ಮ ಮಾಧ್ಯಮಗಳ ಕಣ್ಣಿಗೆ ಗೋಚರಿಸುತ್ತಿಲ್ಲ!

ಭಾರತವೀಗ ಜಗತ್ತಿನ ಅತ್ಯಂತ ದಕ್ಷ ಮತ್ತು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಅದರಲ್ಲೂ ಪರೀಕ್ಷಾ ಫಲಿತಾಂಶದ ಅವಧಿಯನ್ನು 12-14 ಗಂಟೆಗಳಿದ್ದುದನ್ನು 4 ಗಂಟೆಗಳಿಗೆ ಇಳಿಸಿದೆ. ಅಮೆರಿಕದ ಆರೋಗ್ಯ ಇಲಾಖಾಧಿಕಾರಿಗಳೇ, ಅಮೆರಿಕದ ಪರೀಕ್ಷಾ ವ್ಯವಸ್ಥೆ ಜಡವಾಗಿದ್ದು, ವಿಫಲವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಇದರ ಪರಿಣಾಮವಾಗಿಯೇ, ಇರಾನ್, ಅಪ್ಘಾನಿಸ್ಥಾನದಿಂದ ಟಿಮೋರ್ ಲೆಸ್ಟೆವರೆಗಿನ ಏಷ್ಯನ್ ದೇಶಗಳು ತಮ್ಮ ದೇಶಗಳಲ್ಲೂ ಇಂತಹ ಪರೀಕ್ಷಾ ಸೌಕರ್ಯಗಳನ್ನು ಸ್ಥಾಪಿಸಿಕೊಡುವಂತೆ ಭಾರತವನ್ನು ಕೋರಿವೆ. ಇದರಂತೆ, ಭಾರತ ಈಗಾಗಲೇ ಇರಾನ್‌ ಗೆ ತನ್ನ ಆರು ಮಂದಿ ವಿಜ್ಞಾನಿಗಳನ್ನು ಕಳುಹಿಸಿಕೊಟ್ಟು ಅಲ್ಲಿ ತಾತ್ಕಾಲಿಕ ಪ್ರಯೋಗಾಲಯಗಳನ್ನು ತುರ್ತು ನೆಲೆಯಲ್ಲಿ ಸ್ಥಾಪಿಸಿಕೊಟ್ಟಿದ್ದು, ಅಲ್ಲಿ ಈಗಾಗಲೇ 6 ಸಾವಿರಕ್ಕೂ ಅಧಿಕ ನಾಗರಿಕರಿಗೆ ಪರೀಕ್ಷೆ ಮಾಡಿರುವುದಾಗಿ ಇರಾನ್ ತಿಳಿಸಿದೆ. ಆದಾಗ್ಯೂ ಅಲ್ಲಿ ಇರಾನ್ ನಾಗರಿಕರ ದಟ್ಟಣೆಯಿಂದಾಗಿ ಭಾರತೀಯರಿಗೆ ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಕಷ್ಟವಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಮುಂದಿನ ವಾರ ಅಲ್ಲಿರುವ ತನ್ನ ನಾಗರಿಕರನ್ನು ಕರೆತರಲು 3 ವಿಮಾನಗಳನ್ನು ಕಳುಹಿಸಲಿದೆ.

ಭಾರತ ಈಗಾಗಲೇ ಮಾಸ್ಕ್, ಕೈಗವಚ ಸೇರಿದಂತೆ 15 ಟನ್ ಗಳಷ್ಟು ತುರ್ತು ವಿವಿಧ ವೈದ್ಯಕೀಯ ನೆರವು ಸಲಕರಣೆಗಳನ್ನು ಚೀನಾಕ್ಕೆ ಕಳುಹಿಸಿಕೊಟ್ಟಿದೆ. ಮಾಲ್ಡೀವ್ಸ್ ‌ಗೆ 14 ಮಂದಿ ಶ್ವಾಸಕೋಶ ಚಿಕಿತ್ಸಾ ತಜ್ಞರು, ಅನಸ್ತೇಷಿಯಾ ತಜ್ಞರು, ವೈದ್ಯರು, ಪ್ರಯೋಗಾಲಯ ಪರಿಣತರ ತಂಡವನ್ನು ಬೃಹತ್ ಪ್ರಮಾಣದ ಕೋವಿಡ್-19 ವೈದ್ಯಕೀಯ ಪರಿಹಾರ ವಸ್ತುಗಳ ಸಹಿತವಾಗಿ ಕಳುಹಿಸಿಕೊಟ್ಟಿದೆ.

ಭಾರತ ತನ್ನ 30  ವಿಮಾನ ನಿಲ್ದಾಣಗಳು ಮತ್ತು 77 ಸಾಗರ ಬಂದರುಗಳಲ್ಲಿ 1,057,506 ಮಂದಿಯ ತಪಾಸಣೆ ನಡೆಸಿದೆ. ಅಲ್ಲದೆ ಭಾರತಕ್ಕೆ ಆಗಮಿಸುವುದಕ್ಕಾಗಿ ನೀಡಲಾಗಿದ್ದ ಎಲ್ಲ ವೀಸಾಗಳನ್ನು ಮತ್ತು ಒಸಿಐ ಕಾರ್ಡ್‌ದಾರರಿಗೆ ಉಚಿತ ವೀಸಾ ಪ್ರಯಾಣ ಸೌಲಭ್ಯಗಳನ್ನು ಅಮಾನತುಗೊಳಿಸಿದೆ. ಮ್ಯಾನ್ಮಾರ್‌ ನೊಂದಿಗಿನ ಗಡಿಯನ್ನು ಬಂದ್ ಮಾಡಿದೆ. ಹಾಗೆಯೇ ಫೆ.15 ರಿಂದಲೇ ಕೋವಿಡ್-19 ಪೀಡಿತ ದೇಶಗಳಿಂದ ಬರುವ ಭಾರತೀಯರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ನಿಗಾವಹಿಸುತ್ತಿದೆ. ಆದರೆ ಬ್ರಿಟನ್‌ ನಲ್ಲಿ ಇಂತಹ ಯಾವುದೇ ಕ್ಷಿಪ್ರ ಕ್ರಮಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ದಾಖಲಾಗಲು ಕಾರಣವಾಗಿದೆ ಎಂಬುದಾಗಿ ವರದಿಗಳು ಹೇಳುತ್ತವೆ.

ಭಾರತವು ವಿಶ್ವದ ಅತ್ಯಂತ ಬೃಹತ್ ಸರ್ಕಾರಿ ಪ್ರಾಯೋಜಿತ ಆರೋಗ್ಯ ಸುರಕ್ಷಾ ಯೋಜನೆ ಹೊಂದಿದ್ದು, 500 ಮಿಲಿಯ ಫಲಾನುಭವಿಗಳನ್ನು ಒಳಗೊಂಡಿದೆ. ಇದು ಬ್ರಿಟನ್ ಜನಸಂಖ್ಯೆಯ ಸುಮಾರು ಎಂಟು ಪಟ್ಟು ಎಂಬುದನ್ನು ಗಮನಿಸಬೇಕು.

ಇಡಿ ವಿಶ್ವದಲ್ಲೇ ಔಷಧ ಬೆಲೆ ಅತ್ಯಂತ ಕಡಿಮೆ ಇರುವ ಕೆಲವೇ ದೇಶಗಳಲ್ಲಿ ಭಾರತ ಒಂದಾಗಿದೆ. ಸರ್ಕಾರದ ಔಷಧಿ ಬೆಲೆ ನಿಯಂತ್ರಣ ವ್ಯವಸ್ಥೆ ಮತ್ತು ಸ ರ್ಕಾರದ ಜನೌಷಧಿ ಯೋಜನೆಯಡಿ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುವ ಮೂಲಕ ಭಾರತ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿ ಒದಗಿಸುವ ಐದು ದೇಶಗಳಲ್ಲಿ ಭಾರತ ಒಂದಾಗಿದೆ ಎಂಬುದಾಗಿ ಮೆಡ್‌ಬೆಲ್ಲೆ  ರ್ಯಾಂಕ್ ನೀಡಿದೆ.

ಕೋವಿಡ್ -19 ಅನ್ನು ಗುರುತಿಸಿದ ತನ್ನ ವೈದ್ಯನನ್ನು ಚೀನಾ ಬಲವಂತವಾಗಿ ಮೌನವಾಗಿಸಿ ಆರು ವಾರಗಳ ಬಳಿಕ ಈತನ ನಿಗೂಢ ಸಾವು ಸಂಭವಿಸಿದೆ. ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ 2018 ರಲ್ಲಿ ನಿಪಾಹ್ ವೈರಸ್ ಪತ್ತೆಯಾದಾಗ ಮೂವರು ವೈದ್ಯರು ಇದನ್ನು ಗುರುತಿಸಿದರು. ತತ್‌ ಕ್ಷಣವೇ ಸಂಬಂಧಿಸಿದ ಭಾರತೀಯ ಇಲಾಖೆ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಿತು. ಇದರಲ್ಲಿ 17 ಮಂದಿ ಸಾವಿಗೀಡಾಗಿ 2 ಸಾವಿರ ಮಂದಿಯನ್ನು ನಿಗಾಕ್ಕೊಳಪಡಿಸಲಾಗಿತ್ತು. ಭಾರತ ಎಂದೂ ಇದನ್ನು ಸಾಂಕ್ರಾಮಿಕವಾಗಲು ಅವಕಾಶ ನೀಡಲಿಲ್ಲ.

ವಿಶ್ವದ ಅತ್ಯಂತ ವೈಜ್ಞಾನಿಕ ಮತ್ತು ಮಾನವೀಯ ಸಭ್ಯತೆಯನ್ನು ಹೊಂದಿರುವ ನಾಗರಿಕತೆ ಭಾರತದ್ದು ಎಂಬುದು ಕಾಲನ ಪರೀಕ್ಷೆಯಲ್ಲಿ ಸಾಬೀತಾಗಿರುವಂಥದ್ದು. ಭಾರತೀಯ ಸಂಸ್ಕೃತಿಯ ‘‘ನಮಸ್ತೇ’’ಯನ್ನು ಇಂದು ಎಲ್ಲ ವಿಶ್ವ ನಾಯಕರು ಎತ್ತಿ ಹಿಡಿಯುತ್ತಿದ್ದಾರೆ. ಪ್ರಾಚೀನ ಭಾರತದ ಆಹಾರ ಶೈಲಿ ಸಸ್ಯಾಹಾರ ಮತ್ತು ಆಯುರ್ವೇದ ಕಾರಣದಿಂದಾಗಿ ಶತಮಾನಗಳಿಂದ ವಿಶ್ವವನ್ನು ಕಾಡುತ್ತಿರುವ ಪ್ಲೇಗ್‌ ನಂತಹ ಗಂಭೀರ ಸಾಂಕ್ರಾಮಿಕ ಕಾಯಿಲೆಗಳನ್ನು ದಿಟ್ಟವಾಗಿ ಎದುರಿಸಲು ಭಾರತಕ್ಕೆ ಸಾಧ್ಯ ಯಿತು. ಭಾರತ ತನ್ನ ಇತಿಹಾಸದಲ್ಲೆಂದೂ ಸಾಂಕ್ರಾಮಿಕ ರೋಗಗಳ ಕೊಡುಗೆಯನ್ನು ಜಗತ್ತಿಗೆ ನೀಡಿಲ್ಲ ಎಂಬುದು ನಮ್ಮ ಹಿರಿಮೆ ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ನಮ್ಮ ಸರ್ಕಾರ ಏನು ಮಾಡುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಬೇಜವಾಬ್ದಾರಿಯ ಹಿತಾಸಕ್ತಿಗಳು ಹರಡುವ ಸುಳ್ಳನ್ನೇ ನಂಬಿ ಅಂತಹ ಶಕ್ತಿಗಳಿಗೆ ಕುಮ್ಮಕ್ಕು ನೀಡುವುದು ನಾವು ದೇಶಕ್ಕೆ ಬಗೆಯುವ ದ್ರೋಹವಾಗಲಿದೆ. ಇಂತಹ ನಡವಳಿಕೆ ನಮ್ಮದೇ ಜನರಿಗೆ ಅಪಾಯವನ್ನು ಆಹ್ವಾನಿಸುವ ಹೊಣೆಗೇಡಿ ಕೃತ್ಯವಾಗಲಿದೆ ಎಂಬುದನ್ನು ಮರೆಯದಿರೋಣ. ಸಮಸ್ತ ಭಾರತೀಯರೂ ಈಗ ಒಂದಾಗಿ ಎದ್ದುನಿಂತು ಈ ಪಿಡುಗಿನ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ಸರ್ಕಾರದ ಜೊತೆ ಕೈಜೋಡಿಸಿ ಭಾರತವನ್ನು ಕೊರೋನಾ ವೈರಸ್ ಮುಕ್ತ ದೇಶವಾಗಿಸುವ ಧ್ಯೇಯವನ್ನು ಸಾಕಾರಗೊಳಿಸೋಣ.

ಕ್ಷುದ್ರ ರಾಜಕೀಯ  ಮಾಡುವವರ ‘ಐಸೋಲೇಶನ್’ಗೆ ಸಕಾಲವಿದು: ವಿಶ್ವವನ್ನು ಪೆಡಂಭೂತವಾಗಿ ಕಾಡುತ್ತಿರುವ ಕೊರೋನಾ ವೈರಸ್ ಸವಾಲನ್ನು ಎದುರಿಸುವಲ್ಲಿ ಭಾರತ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಪಟ್ಟಭದ್ರ ಹಿತಾಸಕ್ತಿಗಳು ಒಂದೆಡೆ ನಿರಂತರ ಸುಳ್ಳು ಪ್ರಚಾರ, ವದಂತಿಗಳನ್ನು ಹರಡಿ ಜನತೆಯಲ್ಲಿ ಭೀತಿ ಸೃಷ್ಟಿಸಲು ಯತ್ನಿಸುತ್ತಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತಹವರು ಇಲ್ಲೂ ಕ್ಷುದ್ರ ರಾಜಕೀಯ ಮಾಡಲು ಹೊರಟಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ರಾಜಕೀಯ, ಸಂಕುಚಿತ ಭೇದಗಳನ್ನು ಮರೆತು ಇಡಿ ದೇಶ ಒಟ್ಟಾಗಿ ನಿಲ್ಲಬೇಕಾಗಿರುವುದು ಎಲ್ಲರ ಕರ್ತವ್ಯ. ಆದರೆ ಈಗ ಹಾಗಾಗದೆ ಜಾಗತಿಕ ಆರ್ಥಿಕ ಬಿಕ್ಕಟ್ಟು, ಕೊರೋನಾ ವೈರಸ್ ಪಿಡುಗಿನಂತಹ ಸವಾಲುಗಳನ್ನು ಎದುರಿಸಲು ಸಮಸ್ತ ಭಾರತೀಯರೂ ಒಂದಾಗಿ ಇದು ದೇಶಕ್ಕೇ ಅರ್ಥಾತ್ ನಮ್ಮೆಲ್ಲರಿಗೆ ಎದುರಾಗಿರುವ ಸವಾಲು ಎಂಬುದನ್ನು ಅರ್ಥ ಮಾಡಿಕೊಂಡು ಇದರ ವಿರುದ್ಧ ಒಟ್ಟಾಗಿ ಹೋರಾಡಬೇಕಾಗಿರುವುದು ಅಗತ್ಯವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಮನೆಗೆ ಬೆಂಕಿಬಿದ್ದಾಗ ಚಳಿಕಾಯಿಸಿಕೊಳ್ಳುವ ಜನರನ್ನು ಐಸೋಲೇಶನ್ ಮಾಡಬೇಕಾಗಿರುವುದು ಕೂಡಾ ಅಷ್ಟೇ ಅಗತ್ಯ ಎಂಬುದಾಗಿ ಸಾಮಾನ್ಯ ಜನತೆಯೂ ಅಭಿಪ್ರಾಯಪಡುತ್ತಿರುವುದು ಗಮನಾರ್ಹ.

ಕಟ್ಟೆಚ್ಚರ ವಹಿಸೋಣ, ಯುದ್ಧ ಗೆಲ್ಲೋಣ: ಭಾರತದಂತಹ ಜನದಟ್ಟಣೆಯ ದೇಶದಲ್ಲಿ ಇಂತಹ ಸಾಂಕ್ರಾಮಿಕಗಳನ್ನು ಹರಡದಂತೆ ತಡೆಯುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಸಾವಿರಾರು ಮಂದಿ ಭಾರತೀಯರು ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಕರುಳ ಸಂಬಂಧ ಇಲ್ಲಿ ಆತಂಕಿತವಾಗಿದೆ. ತಮ್ಮವರಿಗೆ ಎಲ್ಲಿ ಅಪಾಯ ಎದುರಾದೀತೋ ಎಂಬ ತಲ್ಲಣ ಇಲ್ಲಿನ ಹೆತ್ತವರು, ಪೋಷಕರದಾಗಿದೆ. ಈ ಸಂದರ್ಭ ಅವರ ಬಗೆಗೂ ಕಾಳಜಿ ವಹಿಸಬೇಕಾಗಿರುವುದು ಭಾರತ ಸರ್ಕಾರದ ಕರ್ತವ್ಯವೇ ಆಗಿದೆ. ಇಂತಹ ಮಾನವೀಯತೆಯನ್ನು ತೋರುತ್ತಿರುವ ಸರ್ಕಾರದ ನಿಲುವಿನ ಬಗೆಗೆ ಕೆಲವು ಸಂಕುಚಿತವಾದಿಗಳು ವಿದೇಶದಲ್ಲಿರುವ ಭಾರತೀಯರನ್ನು ತರುವ ಕೆಲಸ ಬೇಕಿತ್ತೇ ಎಂದು ಪ್ರಶ್ನಿಸುತ್ತಿರುವುದು ಬರಿಯ ದುರುದ್ದೇಶ ಮತ್ತು ಕುಹಕವೇ ಆಗಿದೆ ಎಂಬ ಚಿಂತಕರ ಮಾತನ್ನೂ ನಾವು ಗಮನಿಸಬೇಕು. ವಿವಿಧ ದೇಶಗಳ ಮಕ್ಕಳು, ನಾಗರಿಕರು ವಿದೇಶಗಳಲ್ಲಿ ಸಿಲುಕಿ ಒದ್ದಾಡುತ್ತಿರುವವರು ಭಾರತದ ಮಾನವೀಯತೆಯ ಕ್ರಮವನ್ನು ಬೊಟ್ಟು ಮಾಡಿ ತಮ್ಮ ಸರ್ಕಾರಗಳಿಗೆ ಹಿಡಿಶಾಪ ಹಾಕುತ್ತಿರುವುದೂ ಇಲ್ಲಿ ಉಲ್ಲೇಖನೀಯ. ನಾವೂ ಬದುಕೋಣ, ಉಳಿದವರಿಗೂ ಬದುಕಲು ಅವಕಾಶ ಕೊಡೋಣ ಎಂಬ ನಮ್ಮ ವಿಶಾಲ ಚಿಂತನೆ ಕೊರೋನಾ ಹುಯಿಲಿನಲ್ಲಿ ಸಾಯದಿರಲಿ. ‘‘ನಮಸ್ತೇ’’ ನಮ್ಮ ಸಂಸ್ಕಾರವಾಗಲಿ. ಸಸ್ಯಾಹಾರ ನಮ್ಮ ಆಹಾರವಾಗಲಿ. ಕಟ್ಟೆಚ್ಚರ – ಒಗ್ಗಟ್ಟು ನಮ್ಮ ಮಂತ್ರವಾಗಲಿ. ಯೋಗ-ಆಯುರ್ವೇದ ನಮ್ಮ ಜೀವನಶೈಲಿಯಾಗಲಿ (ಚೀನಾ ತನ್ನ ಸಾಂಪ್ರದಾಯಿಕ ವೈದ್ಯಪದ್ಧತಿಯ ಮೂಲಕ ಕೊರೋನಾ ಯುದ್ಧವನ್ನು ಎದುರಿಸಿ ಸಫಲವಾಗುತ್ತಿದ್ದರೆ, ನಮ್ಮಲ್ಲಿ ಇಮ್ಯುನಿಟಿ ಹೆಚ್ಚಿಸುವ ಸಾಂಪ್ರದಾಯಿಕ ಆಹಾರ, ಮನೆಮದ್ದು ಬಳಸಿ ಎಂದರೆ ಅದು ಮೂಢನಂಬಿಕೆ ಎಂದು ಪ್ರಚಾರ ನಡೆಸಲಾಗುತ್ತಿರುವ ವಿಪರ್ಯಾಸವನ್ನೂ ಕಾಣುತ್ತಿದ್ದೇವೆ!)

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss