ಹೊಸದಿಗಂತ ಆನ್ ಲೈನ್ ಡೆಸ್ಕ್:
ಎರಡನೇ ಕೊರೋನಾ ಅಲೆಗೆ ತತ್ತರಿಸಿರುವ ಪಾಕಿಸ್ಥಾನದಲ್ಲಿ ಶಾಲೆ, ಹೊಟೇಲ್ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ದೇಶದ ಶೇ.95ರಷ್ಟು ಆಸ್ಪತ್ರೆ ಬೆಡ್ಗಳು ಭರ್ತಿಯಾಗಿವೆ. ಕೇವಲ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರವೇ ಕೆಲವು ಹಾಸಿಗೆಗಳು ಉಳಿದಿವೆ. ಆದರೆ ಬಹುತೇಕ ಆಸ್ಪತ್ರೆಗಳು ಭರ್ತಿಯಾಗಿರುವುದರಿಂದ ರೋಗಿಗಳನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಿವೆ. ಈಗ ಕೋವಿಡ್-19ವೈರಾಣು ಹೆಚ್ಚು ಮಾರಕವಾಗಿರುವುದು ಸಾಬೀತಾಗುತ್ತಿದೆ. ಇದೀಗ ಒಮ್ಮೆಲೇ ಪಾಕಿಸ್ತಾನದಲ್ಲಿ ಕೊರೋನಾ ಸೋಂಕು ವ್ಯಾಪಕಗೊಂಡಿರುವುದು ಆಘಾತಕ್ಕೆ ಕಾರಣವಾಗಿದೆ.ಈ ವಾರದಿಂದ ಶಿಕ್ಷಣ ಸಂಸ್ಥೆಗಳು, ಹೊಟೇಲ್ಗಳಲ್ಲಿ ಒಳಾಂಗಣ ವ್ಯಾಪಾರವನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ ಎಂಬುದಾಗಿ ಪಾಕ್ ಮೆಡಿಕಲ್ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಖೈಸರ್ ಸಜ್ಜದ್ ಸಜ್ಜದ್ ತಿಳಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ , ತನ್ನ ಸರಕಾರವು ಸಂಪನ್ನ ದೇಶಗಳಲ್ಲಿ ಮಾಡಿರುವಂತೆ ಸಂಪೂರ್ಣ ಲಾಕ್ಡೌನ್ಗಳಿಗೆ ಮುಂದಾಗಿಲ್ಲ ಎಂದು ಹೇಳಿಕೊಂಡಿದ್ದು, ಆದರೆ ಈಗ ಎರಡನೇ ಹಂತದಲ್ಲಿ ಸೋಂಕು ಭಾರೀ ವೇಗದಲ್ಲಿ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುವುದನ್ನು ತಪ್ಪಿಸಲು ಜನತೆ ಪೂರ್ಣ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಆಗ್ರಹಿಸಿದ್ದಾರೆ.