Sunday, June 26, 2022

Latest Posts

ಕೊರೋನಾ ನಂತರದ ಪರಿಣಾಮಗಳಿಗೆ ಆಯುರ್ವೇದ, ಯೋಗ ಸಹಕಾರಿ: ಶ್ರೀಪಾದ್ ನಾಯ್ಕ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದೆಲ್ಲೆಡೆ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಕಳೆದ ೮ ತಿಂಗಳಿಂದ ಎಲ್ಲರ ನಿದ್ದೆಗೆಡಿಸಿದ ಕೊರೋನಾದಿಂದ ಅದೆಷ್ಟು ಜನರು ಗೆದ್ದು , ಗುಣಮುಖರಾಗಿ ಹೊರಬಂದಿದ್ದಾರೆ. ಆದರೆ ಕೆಲವು ಜನರಿಗೆ ಕೊರೋನಾ ಬಳಿಕ ತೊಂದರೆಗಳು ಎದುರಾಗಿವೆ.
ಇಂತಹ ಸಂದರ್ಭದಲ್ಲಿ ಅವುಗಳಿಂದ ಹೊರ ಬರಲು ಆಯುರ್ವೇದ, ಯೋಗ ಮತ್ತು ಇತರ ವಿಧಾನಗಳು ಇಡೀ ಜಗತ್ತಿಗೆ ತುಂಬಾ ಸಹಕಾರಿಯಾಗಲಿವೆ ಎಂದು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ) ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಆಯುಷ್ ಸಚಿವಾಲಯ ಜಂಟಿಯಾಗಿ ಆರಂಭಿಸಿರುವ ರಾಷ್ಟ್ರೀಯ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಆಯುರ್ವೇದವನ್ನು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇಶದೆಲ್ಲೆಡೆ ಕೊರೋನಾವನ್ನು ತಡೆಗಟ್ಟಲು ಮತ್ತು ಉತ್ತಮ ಚಿಕಿತ್ಸೆ ನೀಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೂಲಕ ಕೊರೋನಾ ಸೋಂಕಿನಿಂದ ಜನರು ಬೇಗನೆ ಗುಣಮುಖರಾಗುತ್ತಿದ್ದಾರೆ. ಆದರೆ, ಕೋವಿಡ್-19ರಿಂದ ಗುಣಮುಖರಾಗಿ ನಂತರವೂ ತೊಂದರೆಗಳು ಬಾಧಿಸಿದರೆ ಇಡೀ ವಿಶ್ವಕ್ಕೆ ಆಯುರ್ವೇದ, ಯೋಗ ಮತ್ತು ಆಯುಷ್ ನ ಪದ್ಧತಿಗಳು ತುಂಬಾ ಸಹಾಯಕವಾಗುತ್ತವೆ ಎಂಬ ವಿಶ್ವಾಸ ತಮಗಿದೆ. ಹಾಗಾಗಿ ಅಂತಾರಾಷ್ಟ್ರೀಯ ಪ್ರಯತ್ನಗಳ ಮೂಲಕ ಬೆಂಬಲವೂ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ನಂತರ ಉಂಟಾಗುವ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಲು ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಔಷಧ ವಿಧಾನಗಳು ನೆರವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಇಂದಿನ ಸಾಂಕ್ರಾಮಿಕ ರೋಗದ ಭೀಕರತೆ ನಮ್ಮ ಸಮಾಜ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಲಿದೆ. ಈ ಹಿನ್ನೆಲೆ ಇಂತಹ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ತಡೆಗಟ್ಟುವಿಕೆ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಹೊಸ ಮಾದರಿಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss