Thursday, August 11, 2022

Latest Posts

ಕೊರೋನಾ ನಂತರವೂ ಕಾಡುತ್ತೆ ದೀರ್ಘಕಾಲೀನ ಆರೋಗ್ಯ ಸಮಸ್ಯೆ!

ಹೊಸದಿಲ್ಲಿ: ‘ನಾವು ಯಾವಾಗ ನಾರ್ಮಲ್ ಸ್ಥಿತಿಗೆ ಬರ್‍ತೇವೆ ಡಾಕ್ಟ್ರೇ’ ಕೊರೋನಾ ಮುಕ್ತ ಪ್ರತಿಯೋರ್ವರೂ ವೈದ್ಯರಲ್ಲಿ ಕಳಕಳಿಯಿಂದ ಕೇಳುವ ಪ್ರಶ್ನೆಯಿದು. ವೈದ್ಯರು, ಏನೂ ತೊಂದರೆ ಆಗಲ್ಲ, ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಜಾಗ್ರತೆ ಮಾಡಿ ಎಂದೆಲ್ಲ ರೋಗಿಗಳಿಗೆ ಧೈರ್ಯ ತುಂಬುವುದು ಸಹಜ.
ಅಂದ ಹಾಗೆ, ನಾಡಿಗೇ ಮಹಾಮಾರಿಯಾಗಿರುವ ಕೊರೋನಾ ಹಿಡಿತದಿಂದ ವ್ಯಕ್ತಿ ಪಾರಾದರೂ ಅಥವಾ ಗುಣಮುಖನಾದ್ರೂ ,ಸಂಪೂರ್ಣ ಬಿಡುಗಡೆ ಸಿಕ್ಕಿತೆಂದು ಹೇಳಲಾಗದು. ಈ ವೈರಸ್‌ಗಳು ನಂತರವೂ ಜನರನ್ನು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ. ಕೊರೋನಾದಿಂದ ಗುಣಮುಖರಾದ ೨ತಿಂಗಳ ನಂತರ ಏನೇನೋ ಅನಾರೋಗ್ಯಗಳು ಕಾಡತೊಡಗುತ್ತವೆ. ಈ ಪೈಕಿ ಮಿತಿಮೀರಿ ಸುಸ್ತು ಸಾಮಾನ್ಯ.
ಜರ್ಮನಿಯ ಸಂಸ್ಥೆಯೊಂದರ ಅಧ್ಯಯನ ಪ್ರಕಾರ, ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡವರ ಪೈಕಿ ಕೇವಲ ೧೨.೬ಶೇಕಡಾ ಜನರು ಮಾತ್ರ ೨ತಿಂಗಳ ನಂತರವೂ ಯಾವುದೋ ಸೈಡ್ ಇಫೆಕ್ಟ್‌ಗೆ ಈಡಾಗಿಲ್ಲ. ಮಿಕ್ಕಂತೆ ಬಹುತೇಕರು ಒಂದಲ್ಲ ಒಂದು ಅನಾರೋಗ್ಯಗಳಿಂದ ತತ್ತರಿಸತೊಡಗಿದ್ದಾರೆ.ಕಾಡಿರುವ ಅನಾರೋಗ್ಯಗಳು ಕೂಡ ದೀರ್ಘಕಾಲ ಕಾಟ ಕೊಡುವಂತವು ಎಂಬುದು ಆತಂಕದ ಅಂಶ.
ಕೊರೋನಾ ವೈರಸ್‌ಗಳು ಉಸಿರಾಟ ಸಮಸ್ಯೆಯನ್ನು ಸೃಜಿಸುತ್ತವೆ. ನರವ್ಯೂಹ, ಹೃದಯ, ರಕ್ತನಾಳ, ಯಕೃತ್ತು ಎಲ್ಲವನ್ನೂ ಹಾಳುಗೆಡವಿಬಿಡುತ್ತವೆ. ಕೊರೋನಾ ಸಂತ್ರಸ್ತ ೯೭ಶೇಕಡಾ ರೋಗಿಗಳಿಗೆ ಎದೆನೋವಿನ ಸಮಸ್ಯೆ ಸಾಮಾನ್ಯ. ದೀರ್ಘಕಾಲ ಆಕ್ಸಿಜನ್ ಮತ್ತು ವೆಂಟಿಲೇಟರ್ ಅವಲಂಬನೆಯು ಶ್ವಾಸಕೋಶಕ್ಕೆ ತೊಂದರೆಯುಂಟು ಮಾಡುವುದು. ಕಾರ್ಟಿಕೋಸ್ಟರಾಯ್ಡ್ ಔಷ ಶ್ವಾಸಕೋಶಕ್ಕಾಗುವ ತೊಂದರೆಯನ್ನು ಕಡಿಮೆ ಮಾಡುವುದೇ ವಿನಾ ದೀರ್ಘಕಾಲ ಇದನ್ನೂ ಬಳಸುವಂತಿಲ್ಲ. ಕಾರಣ, ಇದು ದೇಹದ ಬಹು ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿದೆ.
ಹೃದಯ ಬೇನೆ ಕೊರೋನಾ ಸಂತ್ರಸ್ತರಿಗೆ ಮಾಮೂಲು. ಇದು ಕ್ಲಿನಿಕಲ್ ಪರೀಕ್ಷೆಗಳಿಂದ ಮತ್ತು ಅಟಾಪ್ಸಿ ಅಧ್ಯಯನದಿಂದಲೂ ದೃಢಪಟ್ಟಿದೆ. ಹೃದಯದ ಸ್ನಾಯುಕವಚಗಳಲ್ಲಿ ನೋವು, ಹೃದಯ ಬಡಿತ ನಿಧಾನವಾಗುವುದು ಮತ್ತು ಹೃದಯಾಘಾತ ಸಾಧ್ಯತೆಯ ಲಕ್ಷಣಗಳು ಕೊರೋನಾ ರೋಗಿಗಳಲ್ಲಿ ಸಾಮಾನ್ಯ. ಶ್ವಾಸಕೋಶ, ಮಿದುಳು, ಮಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕೂಡ ಕೊರೋನಾ ವೈರಸ್ ನೇರವಾಗಿ ಸೃಜಿಸುವ ಅಪಾಯಗಳು.ವೈರಸ್‌ಗಳ ದಾಳಿಯಿಂದ ಹೃದಯದ ಸ್ನಾಯುಖಂಡಗಳ ಜೀವಕೋಶಗಳು ನಾಶವಾದಂತೆ ರೋಗಿಯು ಮೃತ್ಯುವಿಗೆ ಸಮೀಪವಾಗುತ್ತಾನೆ.
ಕೊರೋನಾದಿಂದ ಗುಣಮುಖರಾದ ರೋಗಿಗಳ ಪೈಕಿ ಹಲವರಿಗೆ ತಿಂಗಳುಗಳ ನಂತರ ಹೃದಯ ಬಡಿತ ನಿಧಾನವಾಗುವುದು, ಹೃದಯಬೇನೆ, ತೀರಾ ಅಸಹನೆಯಂತಹ ತೊಂದರೆಗಳು ಕಾಣಿಸಿವೆ. ಇವು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು. ವೈರಸ್‌ಗಳು ಹೃದಯ ಮತ್ತು ರಕ್ತನಾಳಗಳನ್ನು ನಿಯಂತ್ರಿಸುವ ನರಮಂಡಲಕ್ಕೆ ಕೆಟ್ಟ ಹಾನಿ ಮಾಡುವ ಕಾರಣ ಇವೆಲ್ಲ ಅನಾರೋಗ್ಯಗಳು ಕಾಣಿಸಿಕೊಳ್ಳುತ್ತವೆಂದು ಅಧ್ಯಯನಕಾರರು ಅಭಿಪ್ರಾಯಿಸಿದ್ದಾರೆ.
ವೈರಸ್‌ಗಳು ಮಿದುಳಿಗೂ ವ್ಯಾಪಿಸುವ ಪರಿಣಾಮ, ಕೊರೋನಾ ವಾಸಿಯಾದರೂ ವ್ಯಕ್ತಿ ವಾಸನೆ ಗ್ರಹಿಸುವ ಶಕ್ತಿ, ಅಲ್ಪಕಾಲಕ್ಕೆ ಸ್ಮರಣ ಶಕ್ತಿಶೂನ್ಯತೆ, ತಲೆ ನೋವು, ನಿಶ್ಶಕ್ತಿ ಇತ್ಯಾದಿ ಸಮಸ್ಯೆಗಳಿಂದ ದೀರ್ಘಕಾಲ ತತ್ತರಿಸುತ್ತಾರೆ.
ಸೋಂಕು ಪೀಡಿತರು ಮಾನಸಿಕ ಅಸ್ವಾಸ್ಥ್ಯಕ್ಕೆ ತುತ್ತಾಗುವ ಪ್ರಕರಣಗಳ ಜತೆ ಆತ್ಮಹತ್ಯೆ ಪ್ರಕರಣಗಳು ಕೂಡ ಬೆಳೆಯುತ್ತವೆ. ಇದ್ಯಾಕೆಂದರೆಸ ಕೊರೋನಾ ಚಿಕಿತ್ಸಾ ಹಂತದಲ್ಲಿ ಬಂಧುಗಳು ರೋಗಿಯನ್ನು ಕಾಣುವಂತಿಲ್ಲ, ಕೊರೋನಾ ಕುರಿತು ಇತರರು ವ್ಯಕ್ತಪಡಿಸುವ ಭಯಯುಕ್ತ ಅಸ್ಪೃಶ್ಯತೆಯೂ ರೋಗಿಯ ಮನಸ್ಸಿಗೆ ಆಘಾತಕಾರಿ. ಲಾಕ್‌ಡೌನ್‌ನಿಂದಾಗಿ ಕಾಡುವ ಚಿಂತೆ ,ಉದ್ವೇಗ ಇತ್ಯಾದಿ ವ್ಯಕ್ತಿಯನ್ನು ಮಾನಸಿಕ ರೋಗಿಯಾಗಿ ಪರಿವರ್ತಿಸುತ್ತವೆ. ವೈರಸ್‌ಗಳು ಮಿದುಳಿನ ಮೇಲೆ ಬೀರುವ ಪರಿಣಾಮದಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ಕೆಡುತ್ತದೆ ಅಥವಾ ಗುಣಮುಖನಾದ ನಂತರವೂ ‘ದೂರವಿಡೋ ’ಸಮಾಜದ ಧೋರಣೆಯೂ ವ್ಯಕ್ತಿಯನ್ನು ಏಕಾಂಗಿತನಕ್ಕೆ, ತನ್ಮೂಲಕ ಮಾನಸಿಕ ಅನಾರೋಗ್ಯಕ್ಕೆ ದೂಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ವಿಚಿತ್ರವೆಂದರೆ, ಕೊರೋನಾ ನಂತರದ ಈ ರೋಗ ಲಕ್ಷಣಗಳೆಲ್ಲ ಕೊರೋನಾದ ಸಣ್ಣಪುಟ್ಟ ಲಕ್ಷಣಗಳಿಗಾಗಿ ಚಿಕಿತ್ಸೆಗೊಳಗಾಗಿ ಗುಣಮುಖರಾದ, ಕೊರೋನಾ ಕಾಡುವ ಮುನ್ನ ಆರೋಗ್ಯವಂತರಾಗಿದ್ದ ಯುವಕರಲ್ಲೇ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದು ಅಧ್ಯಯನ ತಿಳಿಸಿದೆ.
ಕಠಿಣ ವ್ಯಾಯಾಮ ಮಾಡುವುದರಿಂದ ವೈರಸ್ ಹತ್ತಿರ ಸುಳಿಯುವುದಿಲ್ಲ ಎಂಬ ಸಲಹೆಯಿದೆ.ಆದರೆ ಕಾಯಿಲೆ ಸಂದರ್ಭ ಈ ತೆರ ವ್ಯಾಯಾಮ ಸಲ್ಲದು. ಇದರಿಂದ ಹೃದಯದಲ್ಲಿ ವೈರಸ್‌ಗಳ ಸಂಖ್ಯೆ ಜಾಸ್ತಿಯಾಗುವ ಅಪಾಯವಿದೆ ಮಾತ್ರವಲ್ಲ ಹಠಾತ್ ಹೃದಯಾಘಾತವಾಗುವ ಭೀತಿಯೂ ಇದೆ ಎಂದು ಬ್ರಿಟಿಷ್ ಪತ್ರಿಕೆಯೊಂದು ಈಚೆಗೆ ವರದಿ ಮಾಡಿತ್ತು.
ಕೊರೋನಾ ನಂತರದ ರೋಗಗಳ ನಿಯಂತ್ರಣ ನಿಟ್ಟಿನಲ್ಲಿ ,ಕಠಿಣ ವ್ಯಾಯಾಮಗಳ ಬದಲು ಸಾಕಷ್ಟು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮೂಲಕ ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಕುಟುಂಬ ಸದಸ್ಯರು ರೋಗಿಯ ಮಾನಸಿಕ ಸ್ವಾಸ್ಥ್ಯ ಕೆಡದಂತೆ ಆತನನ್ನು ಅಥವಾ ಆಕೆಯನ್ನು ಆದಷ್ಟು ಕಾಳಜಿ ,ಕರುಣೆಯಿಂದ ನಿಗಾವಿಟ್ಟು ನೋಡಿಕೊಳ್ಳುವುದೂ ಅತಿ ಮುಖ್ಯವೆಂದಿದೆ ಅಧ್ಯಯನ.
ಕೊರೋನಾ ಸಂಬಂತ ಇದುವರೆಗಿನ ಅಧ್ಯಯನಗಳು, ಮರಣ ಪ್ರಮಾಣವನ್ನು ಕುಂಠಿತಗೊಳಿಸುವುದು, ರೋಗಿ ಆಸ್ಪತ್ರೆಗೇ ಅಂಟಿಕೊಳ್ಳುವಂತಾಗದಂತೆ ನೋಡಿಕೊಳ್ಳುವುದು ಮತ್ತು ಕೊರೋನಾ ಪ್ರಸರಣ ತಡೆಯುವುದಕ್ಕೆ ಸೀಮಿತವಾಗಿದೆ. ಸದ್ಯದ ಸನ್ನಿವೇಶದಲ್ಲಿ ಇದು ಅನಿವಾರ್ಯವಾದರೂ, ಕೊರೋನಾ ಸೃಜಿಸಿಹೋಗುವ ದೀರ್ಘಕಾಲೀನ ಕೆಡುಕುಗಳತ್ತ ಯಾರೂ ಗಮನ ಹರಿಸಿಲ್ಲ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss