ಚಿತ್ರದುರ್ಗ: ಕೋವಿಡ್-19 ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು ಸಲಹೆ ಮಾಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಜಿ.ಪಂ., ತಾ.ಪಂ. ಸದಸ್ಯರು, ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಪಿಡಿಒಗಳಿಗೆ ಕೋವಿಡ್-೧೯ ನಿಯಂತ್ರಣಕ್ಕಾಗಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಸನಾತನ ಪರಂಪರೆಯನ್ನು ನೆನಪಿಸಿಕೊಂಡು ಅದಕ್ಕನುಗುಣವಾಗಿ ನಮ್ಮ ಜೀವನ ಶೈಲಿಯಲ್ಲಿಯೂ ಬದಲಾವಣೆ ಮಾಡಿಕೊಂಡು ಕೋವಿಡ್-೧೯ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಕೊರೊನಾದೊಂದಿಗೆ ನಾವು ಜೀವಿಸುವ ಅವಶ್ಯಕತೆ ಇದೆ. ನಮ್ಮ ಜೀವನ ಶೈಲಿ ಬದಲಾಯಿಸಿಕೊಂಡು ಬದುಕುವ ಕಲೆಯನ್ನು ಕಲಿತುಕೊಳ್ಳಬೇಕು. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾಗಿರಬೇಕು. ಕೊರೊನಾ ಸೋಂಕು ಇತರರಿಗೆ ಹರಡದಂತೆ ನಾವು ಕಾಳಜಿ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೋನಾ ನಿಯಂತ್ರಣದಲ್ಲಿ ನೂರು ದಿನಗಳು ನಡೆದು ಬಂದ ಹಾದಿಯ ಪಕ್ಷಿನೋಟವನ್ನು ಸವಿಸ್ತಾರವಾಗಿ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಶ್ರೀಧರ್, ಡಾ.ದೀಪಕ್, ಡಾ.ಬಸವರಾಜ್ ಕೋವಿಡ್-೧೯ ನಿಯಂತ್ರಣ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಜಿ.ಪಂ. ಸದಸ್ಯರಾದ ಸೌಭಾಗ್ಯ, ಗುರುಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ, ಡಾ.ಕುಮಾರಸ್ವಾಮಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವೈದ್ಯರು ಉಪಸ್ಥಿತರಿದ್ದರು.