ಕೊರೋನಾ ನಿಯಂತ್ರಣಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆ: ರಾಜ್ಯಕ್ಕೆ 742 ಕೋಟಿ

0
92

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯಿಂದ ರಾಜ್ಯಕ್ಕೆ ೭೪೨ ಕೋಟಿ ರೂ ಅನುದಾನ ಬಿಡುಗಡೆಯಾಗಿದೆ.

ಕೇಂದ್ರ ಬಿಡುಗಡೆ ಮಾಡಿರುವ ಈ ಅನುದಾನದಲ್ಲಿ ಅಧಿಕಾರಿಗಳಿಗೆ 232 ಕೋಟಿ ರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 70 ಕೋಟಿ  ರೂ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 50 ಕೋಟಿ ರೂ, ಪೊಲೀಸ್ ಇಲಾಖೆಗೆ 12 ಕೋಟಿ ರೂ,  ರೈಲ್ವೇ ಇಲಾಖೆಗೆ 13  ಕೋಟಿ ರೂ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2.89 ಕೋಟಿ ರೂ ಸೇರಿದಂತೆ 379.89 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಇನ್ನೂ 362.11 ಕೋಟಿ ರೂ ಲಭ್ಯವಿದೆ. ಇದನ್ನೂ ಕೂಡಾ ಕೋವಿಡ್ ನಿಯಂತ್ರಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ಜುಲೈ, ಆಗಸ್ಟ್‌ನಲ್ಲಿ ಆರ್ಭಟ: ಬರುವ ಜುಲೈ ಮತ್ತು ಆಗಸ್ಟ್‌ನಲ್ಲಿ ಕೊರೋನಾ ಸೋಂಕು ವ್ಯಾಪಿಸುವ ಪ್ರಮಾಣ ಹೆಚ್ಚಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ವಹಿಸುತ್ತಿದೆಯಲ್ಲದೆ, ಲಾಕ್‌ಡೌನ್ ಸ್ವರೂಪದ ಬಗ್ಗೆಯೂ ಚಿಂತನೆ ನಡೆಸುತ್ತಿದೆ.
ಒಂದೆಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಇನ್ನೊಂದೆಡೆ ಆರ್ಥಿಕ ಚಟುವಟಿಕೆಗೂ ಅವಕಾಶ ಮಾಡಿ ಕೊಡಬೇಕಿದೆ. ಜೊತೆಗೆ ಜನರ ಜೀವ ಮತ್ತು ಜೀವನವನ್ನೂ ಉಳಿಸಬೇಕಿದೆ. ಕೊರೋನಾ ನಿಯಂತ್ರಣವನ್ನೂ ಮಾಡ ಬೇಕಿದೆ. ಎಲ್ಲ ಸವಾಲುಗಳನ್ನು ಎದುರಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ೨೫೦೦ ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು ಮುಂದಾಗಿದೆ. ಅಲ್ಲದೆ, ಬೆಂಗಳೂರಿನ ೧೩ ಕಡೆಗಳಲ್ಲಿ ಕೊರೋನಾ ಕಾಳಜಿ ಸ್ಥಾಪಿಸಿ, ೧೩ ಸಾವಿರಕ್ಕೂ ಅಧಿಕ  ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಗರಿಷ್ಟ ೫ ಸಾವಿರ ಹಾಸಿಗೆ ವ್ಯವಸ್ಥೆ ಮಾಡುವ ಸಲುವಾಗಿ ಮಂಗಳವಾರ ಆಡಳಿತ ಮಂಡಳಿಗಳೊಂದಿಗೆ ಸಭೆ ಕರೆದಿದೆ.

ಒಟ್ಟಾರೆ ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಕೊರೋನಾ ಸೇನಾನಿಗಳೂ ಶ್ರಮ ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಗರಿಕರೂ ಸಾಮಾಜಿಕ ಪ್ರಜ್ಞೆಯಿಂದ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಕಂಡ ಕಂಡಲ್ಲಿ ಉಗುಳುವುದನ್ನು ಮಾಡಬಾರದು ಎಂದು ಸರ್ಕಾರ ಮನವಿ ಮಾಡಿದೆ.

ನಿಯಂತ್ರಣಕ್ಕೆ ಹಲವು ಕ್ರಮ: ಜುಲೈ, ಆಗಸ್ಟ್‌ನಲ್ಲಿ ಹೆಚ್ಚಲಿದೆ ಕೊರೋನಾ ಅಟ್ಟಹಾಸ?

ಕೊರೋನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ 2500 ಹಾಸಿಗೆ ಮೀಸಲು
10 ಕಾಳಜಿ ಕೇಂದ್ರಗಳಲ್ಲಿ 13 ಸಾವಿರ ಹಾಸಿಗೆ ವ್ಯವಸ್ಥೆ
ವೈದ್ಯಕೀಯ ಕಾಲೇಜುಗಳೊಂದಿಗೆ ಮಂಗಳವಾರ ಸಭೆ

ಪಾಸಿಟೀವ್ ಎಂದು ಗೊತ್ತಾದ 8 ಗಂಟೆಯೊಳಗೆ ಆಸ್ಪತ್ರೆ ಅಥವಾ ಕಾಳಜಿ ಕೇಂದ್ರಕ್ಕೆ ದಾಖಲಿಸುವ ವ್ಯವಸ್ಥೆ ರಾತ್ರಿ 8 ರಿಂದ ಬೆಳಗ್ಗೆ 5ರವರೆಗೂ ರಾಜ್ಯಾದ್ಯಂತ ಕರ್ಫ್ಯೂ ಜಾರಿ

ರೋಗಲಕ್ಷಣವುಳ್ಳ ಸೋಂಕಿತರು ಖಾಸಗಿ ಆಸ್ಪತ್ರೆಗೆ: ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಕೊರೋನಾ ನಿಯಂತ್ರಣದ ವಿಚಾರದಲ್ಲಿ ಬೇರೆಲ್ಲೆಡೆ ಸರ್ಕಾರಗಳು ಕೈಚೆಲ್ಲಿ ಕುಳಿತಿವೆ. ನಮ್ಮ ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಲೇ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಒಟ್ಟು ಹಾಸಿಗೆಗಳ ಪೈಕಿ ಶೇ.೫೦ ರಷ್ಟನ್ನು ಸರ್ಕಾರದ ಸುಪರ್ದಿಗೆ ನೀಡಬೇಕು. ಅಲ್ಲಿಗೆ ಕೊರೋನಾ ರೋಗಿಗಳನ್ನು ಸರ್ಕಾರ ಶಿಫಾರಸು ಮಾಡಲಿದೆ. ೭೫೦ ಹಾಸಿಗೆ ನಾಳೆಯೇ ತಕ್ಷಣ ಸರ್ಕಾರದ ಸುಪರ್ದಿಗೆ ಬರಲಿದ್ದು, ೨೫೦೦ ಹಾಸಿಗೆಗಳು ಒಂದು ವಾರದಲ್ಲಿ ಹಂತ-ಹಂತವಾಗಿ ಹಸ್ತಾಂತರ ಆಗಲಿವೆ. ರೋಗಲಕ್ಷಣಗಳುಳ್ಳ ಸೋಂಕಿತರನ್ನು ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಇದಕ್ಕಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸರ್ಕಾರದ ಕಡೆಯಿಂದ ಐಎಎಸ್ ಅಧಿಕಾರಿಗಳಾದ ಪಂಕಜ್ ಕುಮಾರ್ ಪಾಂಡೆ, ತುಷಾರ್ ಗಿರಿನಾಥ್ ಹಾಗೂ ಖಾಸಗಿ ಆಸ್ಪತ್ರೆಗಳ ಕಡೆಯಿಂದ ಡಾ.ರವೀಂದ್ರ, ಡಾ.ನಾಗೇಂದ್ರಸ್ವಾಮಿ ಸಮಿತಿಯಲ್ಲಿ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ನೂತನ ಯಂತ್ರಕ್ಕೆ ಚಾಲನೆ ನೀಡಲಾಯಿತು. ಇದರಲ್ಲಿ ಚಾಲಕ ರಿಮೋಟ್ ಮೂಲಕವೇ ದ್ರಾವಣವನ್ನು ಸಿಂಪಡಿಸಬಹುದು.

LEAVE A REPLY

Please enter your comment!
Please enter your name here