Thursday, June 30, 2022

Latest Posts

ಕೊರೋನಾ ನಿಯಂತ್ರಣದಲ್ಲಿ ಕೊಡಗು ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿ: ಸಚಿವ ಶ್ರೀರಾಮುಲು

ಮಡಿಕೇರಿ: ಕೊರೋನಾ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಕೊಡಗು ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಇಲ್ಲಿ ಇದು ಹೇಗೆ ಸಾಧ್ಯವಾಯಿತು ಎಂಬ ಮಾಹಿತಿ ಒದಗಿಸಿದಲ್ಲಿ ಅದನ್ನು ಇತರ ಜಿಲ್ಲೆಗಳಲ್ಲೂ ಅನುಷ್ಠಾನಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಮಂಗಳವಾರ ಅಪರಾಹ್ನ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಚಿವರು, ಇಡೀ ರಾಜ್ಯದಲ್ಲಿ ಕೊರೋನಾ ಮಹಾಮಾರಿ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ಇತರೆ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರ ನಡುವೆಯೂ ಕೊಡಗು ಜಿಲ್ಲೆ ಅತ್ಯಂತ ಪರಿಣಾಮಕಾರಿಯಾಗಿ ಕೊರೋನಾ ಸಾಂಕ್ರಮಿಕ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಅಲ್ಲಿನ ಆಡಳಿತ ವ್ಯವಸ್ಥೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿದೆ. ಹೀಗಿದ್ದೂ ಪ್ರಕರಣಗಳು ಹೆಚ್ಚುತ್ತಿವೆ. ಕೊಡಗಿನಲ್ಲಿ ಇದರ ನಿಯಂತ್ರಣ ಹೇಗೆ ಸಾಧ್ಯವಾಯಿತು ಎನ್ನುವ ಮಾಹಿತಿ ಒದಗಿಸಿದಲ್ಲಿ, ಅದನ್ನು ಇತರೆ ಜಿಲೆಗಳಲ್ಲಿಯೂ ಅನುಷ್ಠಾನಗೊಳಿಸಲಾಗುತ್ತದೆಂದು ಮುಕ್ತವಾಗಿ ನುಡಿದರು.
ರಾಜ್ಯದಲ್ಲಿ 5,760 ಕೋವಿಡ್ ಪ್ರಕರಣಗಳಲ್ಲಿ 2,514 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರದಿಂದ ಬರುವವರನ್ನು 14 ದಿನಗಳ ಕಾಲ ಹೋಂ ಕ್ವಾರೈಂಟೇನ್‍ನಲ್ಲಿ ಇಡಲಾಗುವುದು. ಮನೆಗೆ ಆಹಾರ, ತರಕಾರಿ ಪೂರೈಕೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ತಜ್ಞ ವೈದ್ಯರ ನೇಮಕ : ರಾಜ್ಯದ ಎಲ್ಲಾ ಆಸ್ಪತ್ರೆಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು, ತಜ್ಞ ವೈದ್ಯರು ಹಾಗೂ ಪ್ರಯೋಗಾಲಯ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದರು.
ಪರೀಕ್ಷೆಗಳಿಲ್ಲದೆ ಹೆರಿಗೆ ಮಾಡಿಸಿ: ಕೊರೋನಾ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರೆಡ್ ಝೋನ್, ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಗಳಿಂದ ಆಸ್ಪತ್ರೆಗಳಿಗೆ ಬರುವ ಗರ್ಭಿಣಿ ಮಹಿಳೆಯರಿಗೆ ಕೊರೋನಾ ಸಂಬಂಧಿತ ಪರೀಕ್ಷೆಗಳಿಲ್ಲದೆ ಹೆರಿಗೆ ಮಾಡಿಸಲು ನಿರ್ಧಾರ ಕೈಗೊಂಡಿರುವುದಾಗಿ ಸಚಿವ ಶ್ರೀರಾಮುಲು ತಿಳಿಸಿದರು.
ಈ ತಿಂಗಳು ಸುಮಾರು 86 ಸಾವಿರ ಗರ್ಭಿಣಿಯರ ಹೆರಿಗೆಯಾಗಲಿದ್ದು, ಇವರಿಗೆ ತೊಂದರೆಯಾಗದ ರೀತಿಯಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ಸಚಿವರು ತಿಳಿಸಿದರು.
ಮಕ್ಕಳು ಆತಂಕಕ್ಕೆ ಒಳಗಾಗದಂತೆ ನೋಡಿಕೊಳ್ಳಿ: ಇದೇ ತಿಂಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದ್ದು, ಈ ಸಂದರ್ಭ ಮಕ್ಕಳು ಆತಂಕಕ್ಕೆ ಒಳಗಾಗದಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ತಲಾ ಇಬ್ಬರಂತೆ ಮಕ್ಕಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪರೀಕ್ಷೆಗೆ ಹಾಜರಾಗಲು ಅನುಕೂಲತೆ ಒದಗಿಸಿಕೊಡಬೇಕೆಂದು ನಿರ್ದೇಶನ ನೀಡಿದರು.
ತಜ್ಞರ ಸಲಹೆ ಆಧರಿಸಿ ಶಾಲಾರಂಭ: ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ತಜ್ಞರ ಸಮಿತಿ ರಚಿಸಲಾಗಿದ್ದು, ಅವರ ಅಭಿಪ್ರಾಯಗಳನ್ನು ಆಧರಿಸಿ ಶಾಲೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆಂದು ಸಚಿವರು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಇದುವರೆಗೆ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಇದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಹಾಗೂ ಕೊಡಗು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಕಾರ್ಯಪ್ಪ ಅವರು ಕೋವಿಡ್- 19 ಸಂಬಂಧ ಹಲವು ಮಾಹಿತಿ ನೀಡಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ ಸುಮನ್, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಅಶ್ವಿನಿ ಆಸ್ಪತ್ರೆಗೆ ಭೇಟಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ನಗರದ ಅಶ್ವಿನಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ವೈದ್ಯಾಧಿಕಾರಿಗಳಿಂದ ಹಲವು ಮಾಹಿತಿ ಪಡೆದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss