ಮೈಸೂರು: ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ನ ಮೂವರು ಶಾಸಕರು ಆರೋಪಿಸಿದರು.
ಶುಕ್ರವಾರ ಮೈಸೂರಿನ ರೈಲು ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ, ಈ ಸರ್ಕಾರದ್ದು ನಾಲಿಗೆಯಲ್ಲಿ ಬೆಣ್ಣೆ, ಮನಸ್ಸಲ್ಲಿ ವಿಷ ತುಂಬಿದೆ. ಮೊದಲು ಕೊರೋನಾಗೆ ಚಪ್ಪಾಳೆ ಹೊಡೆದು ಸ್ವಾಗತ ಮಾಡಿದರು. ನಂತರ ದೀಪ ಹಚ್ಚಿ ಆರತಿ ಮಾಡಿ ಕರೆದುಕೊಂಡರು. ಆ ಬಳಿಕ ಹೆಬ್ಬಾಗಿಲು ತೆರೆದು ಬರಮಾಡಿಕೊಂಡು, ತಾಂಡವಾಡಲು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೋವಿಡ್ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಂದಿದ್ದ ಅನ್ನಭಾಗ್ಯ ನೆರವಾಗಿದೆ. ಜನರ ಹಸಿವನ್ನು ಆ ಅನ್ನಭಾಗ್ಯ ತಡೆದಿದೆ. ಕೊರೋನಾ ಸಮಯದಲ್ಲಿ ವಿವಿಧ ವಿಭಾಗದ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರವಾಗಿ ಹಣ ನೀಡುತ್ತೇವೆ ಎಂದಿದ್ದರು. ಆದರೆ ಸರ್ಕಾರ ಯಾವುದೇ ಹಣವನ್ನು ಹಾಕಿಲ್ಲ. ಇದುವರೆಗೂ ಹಣ ಸಂಕಷ್ಟಗೀಡಾದವರ ಕೈಸೇರಿಲ್ಲ.
ವಿಧಾನಸೌಧದಲ್ಲಿ ಕೇಳಿದರೆ ಜನರ ಹತ್ತಿರ ಹೋಗೋಣ ಎನ್ನುತ್ತಾರೆ. ಮಾಧ್ಯಮದ ಮೂಲಕ ಕೇಳಿದರೆ ಬೀದಿಯಲ್ಲಿ ಕೇಳುತ್ತೀರಾ ಅಂತಾರೆ. ಬಿಜೆಪಿಯವರು ಪಲಾಯನವಾದಿಗಳು. ಒಂದು ವರ್ಷ ಆಡಳಿತ ಸಂಪೂರ್ಣವಾಗಿ ವಿಫಲರಾಗಿದೆ. ಸಚಿವರಾಗುವ ಸಮರ್ಥರು ಯಾರೂ ಇಲ್ಲ. ಕಾಂಗ್ರೆಸ್ನಿAದ ಕರೆದುಕೊಂಡು ಹೋಗಿ ಸಚಿವರನ್ನಾಗಿ ಮಾಡಿದ್ದಾರೆ. ಅವರು ಕ್ಯಾಬಿನೇಟ್ ನಲ್ಲಿ ಇರಬೇಕು ಎಂಬ ಕಾರಣಕ್ಕೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರು ಜಿಲ್ಲೆಯಲ್ಲಿ ಕೊರೋನಾ ಹಾವಳಿ ಎಲ್ಲೆ ಮೀರಿ ಹೋಗಿದೆ. ಜಿಲ್ಲಾಡಳಿತ ಪ್ರತಿ ದಿನ ಬುಲೆಟಿನ್ ಬಿಡುಗಡೆ ಮಾಡಿ ಸೋಂಕಿತರು, ಸತ್ತವರ ಲೆಕ್ಕ ಕೊಡುವುದರಲ್ಲೇ ಕಾಲ ಕಳೆಯುತ್ತಿದೆ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಹೆಲ್ಪ್ ಲೆಸ್ ಅಂತಾರೆ. ಮೈಸೂರಿನಲ್ಲಿ ವೆಂಟಿಲೇಟೆರ್ ಕೊರತೆ ಇದೆ. ಕೋವಿಡ್ ಆಸ್ಪತ್ರೆಗೆ ಹೋದರೆ ಸಾಕಷ್ಟು ಅವ್ಯವಸ್ಥೆ ಇದೆ. ರಾಜ್ಯ ಸರ್ಕಾರ ಪ್ರಚಾರಕ್ಕೆ ಬಳಸಿದ ಹಣದಲ್ಲಿ ಆಸ್ಪತ್ರೆ ಕಟ್ಟಿಸಿದರೆ ನೂರು ಜನ ಬದುಕುತ್ತಿದ್ದರು ಎಂದರು.
ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೊರೋನಾ ತುರ್ತು ಪರಿಸ್ಥಿತಿ ನೆಪದಲ್ಲಿ ರಾಜ್ಯ ಸರ್ಕಾರ ಮರಣ ಶಾಸನ ಬರೆಯುತ್ತಿದೆ. ಸದನದಲ್ಲಿ ವಿಷಯ ಮಂಡನೆ ಮಾಡದೇ ತಿದ್ದುಪಡಿಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಎಪಿಎಂಸಿ, ಭೂ ಸುಧಾರಣೆ ಸೇರಿ ಹಲವು ಕಾಯ್ದೆಗಳನ್ನು ತರಾತುರಿಯಲ್ಲಿ ಜಾರಿಗೆ ತರುತ್ತಿದೆ.ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯದ ಅನ್ನದಾತ ಕೂಲಿ ಕಾರ್ಮಿಕನಾಗುತ್ತಾನೆ ಎಂದು ಕಿಡಿಕಾರಿದರು.
ಲಾಕ್ ಡೌನ್ ಮಾಡಿ ಕೊರೋನಾ ಸಂಪರ್ಕಿತರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು .ಆದ್ರೆ ಹೋಂ ಕ್ವಾರಂಟೈನ್ ಮಾಡುತ್ತಿದ್ದಾರೆ. ಹೀಗೆ ಆದರೆ ಕೊರೋನಾ ಕೈ ಮೀರಿ ಹರಡಲಿದೆ. ಜನಪ್ರತಿಧಿಗಳು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ ಬಿ ಜೆ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.