ಹೊಸದಿಲ್ಲಿ: ಚೀನಾದಲ್ಲಿ ಕೋರೋನಾ ವೈರಸ್ ಹರಡಿದ ಬಳಿಕ ಅನೇಕ ಉದ್ಯಮಗಳು ಉತ್ಪಾದನೆ ಸ್ಥಗಿತಗೊಳಿಸಿದ್ದು, ಜಾಗತಿಕ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಇದೀಗ ಟಿವಿ (ದೂರದರ್ಶಕ) ಉತ್ಪಾದನೆಗೂ ಈ ಬಿಸಿ ತಾಕಿದ್ದು, ಮಾರ್ಚ್ನಿಂದ ಟಿವಿ ಬೆಲೆ ಶೇ.10 ಹೆಚ್ಚಾಗಲಿದೆ.
ಬಹುತೇಕ ಟಿವಿ ಘಟಕಗಳಲ್ಲಿ ಶೇ.60 ರಷ್ಟು ಟಿವಿ ತಯಾರಿಕೆಗೆ ಬಳಸುವ ಓಪನ್ ಸೆಲ್ ಪ್ಯಾನಲ್ ಪಾರ್ಟ್ಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಚೀನಾದಲ್ಲಿ ಹೊಸವರ್ಷದಿಂದ ಶುರುವಾದ ಕೊರೋನಾ ಪರಿಣಾಮಕ್ಕೂ ಮುಂಚಿತವಾಗಿಯೇ ಟಿವಿ ಘಟಕಗಳು ಸಾಕಷ್ಟು ಪ್ಯಾನಲ್ಗಳನ್ನು ಈಗಾಗಲೇ ದಾಸ್ತಾನು ಮಾಡಿಕೊಂಡಿವೆ.
ಆದರೋ ಕೊರೋನಾ ಕಾಟದಿಂದ ಉತ್ಪಾದನೆಗೆ ತೊಡಕು ಎದುರಾಗಿದ್ದು, ಟಿವಿ ಘಟಕಗಳಲ್ಲಿ ಪೂರೈಕೆ ಕೊರತೆ ಕಂಡುಬಂದಿದೆ. ಇನ್ನು ಸೋಂಕಿನ ಭೀತಿಯಿಂದ ಹಲವು ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಮತ್ತೊಂದಷ್ಟು ಕಾರ್ಖಾನೆಗಳು ಮರು ಆರಂಭಗೊಂಡಿದ್ದರೂ, ಕಡಿಮೆ ಕಾರ್ಮಿಕರಿಂದಾಗಿ ಉತ್ಪಾದನೆ ವಿಳಂಬವಾಗುತ್ತಿದೆ.
ಈ ಕುರಿತು ಭಾರತದ ಥಾಮಸ್ ವಿಶೇಷ ಟಿವಿ ಬ್ರಾಂಡ್ ಪರವಾನಗಿ ಪಡೆದಿರುವ ಸಂಸ್ಥೆ ಎಸ್ಪಿಪಿಎಲ್ನ ಸಿಇಒ ಅವನೀತ್ ಸಿಂಗ್ ಮಾರ್ವಾ ಮಾಹಿತಿ ನೀಡಿದ್ದು, ಮಾರ್ಚ್ 2020ರ ಹೊತ್ತಿಗೆ ಚೀನಾದ ಪ್ರಸ್ತುತ ಕೊರೋನಾ ವೈರಸ್ ಬಿಕ್ಕಟ್ಟಿನಿಂದ ಟಿವಿ ಬೆಲೆಗಳು ಶೇ.10 ಹೆಚ್ಚಾಗಲಿದೆ. ಕಚ್ಚಾವಸ್ತುಗಳ ಕೊರತೆ ಹೆಚ್ಚಾಗಿದ್ದು, ಟಿವಿ ತಯಾರಿಕಾ ವಸ್ತುಗಳ ಬೆಲೆಯಲ್ಲಿ ಶೇ.20 ಏರಿಕೆಯಾಗಿದೆ ಎಂದಿದ್ದಾರೆ.
ಅಲ್ಲದೆ, ಪ್ರಸ್ತುತ ಮಾರುಕಟ್ಟೆ ಸನ್ನಿವೇಶ ಗಮನಿಸಿದೆರೆ, ಉತ್ಪಾದನಾ ನಷ್ಟ ಶೇ.30 ರಿಂದ 50 ಆಗಬಹುದೆಂದು ಹೇಳಿದ್ದಾರೆ. ಈಗಾಗಲೇ ಸ್ಥಳೀಯ ಉತ್ಪಾದನೆ ಉತ್ತೇಜಿಸಿ ವೆಚ್ಚ ಕಡಿಮೆ ಮಾಡಲು ಸೆಲ್ ಪ್ಯಾನಲ್ಗಳ ಆಮದು ಸುಂಕವನ್ನು ಭಾರತ ಸರ್ಕಾರ ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ.
ಫ್ರಿಡ್ಜ್, ಏಸಿ ಬೆಲೆ ಹೆಚ್ಚಳ?: ಹೆಚ್ಚಿನ ಸಂಸ್ಥೆಗಳು ರೆಫ್ರಿಜಿರೇಟರ್ ಮತ್ತು ಏಸಿಗಳ ಉತ್ಪಾದನಗೆ ಚೀನಾ ವಸ್ತುಗಳನ್ನೇ ಅವಲಂಬಿಸಿದ್ದು ಬಿಡಿಭಾಗಗಳ ಕೊರತೆಯಿಂದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ಡೀಪ್ ಫ್ರೀಜರ್ಗಳ ಬೆಲೆ ಶೇ.2.5ರಷ್ಟು ಏರಿಕೆಯಾಗಿದೆ ಎಂದು ಅವನೀತ್ ಸಿಂಗ್ ಹೇಳಿದ್ದಾರೆ.