Saturday, August 13, 2022

Latest Posts

ಕೊರೋನಾ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ವಾಟಾಳ್‌ನಾಗರಾಜ್

ಮೈಸೂರು: ಮಹಾಮಾರಿ ಕೊರೋನಾ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್ ನಾಗರಾಜ್ ಗುರುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಆರ್ ಗೇಟ್ ಬಳಿ ಕೆಲ ಕಾಲ  ಪ್ರತಿಭಟನೆ ನಡೆಸಿದ ಅವರು, ಘೋಷಣೆಗಳನ್ನು ಕೂಗಿದರು. ಬಳಿಕ ಮಾತನಾಡಿ, ರಾಜ್ಯ ಸರ್ಕಾರ ಕೊರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮಂತ್ರಿಗಳಿಗೆ ಬುದ್ಧಿಯಿಲ್ಲ, ಮಂತ್ರಿಗಳಲ್ಲೇ ಸಮನ್ವಯದ ಕೊರತೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಾತನ್ನು ಯಾರೂ ಕೇಳುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿರಗಳ ಸಂಖ್ಯೆಯಲ್ಲಿ ಸೋಂಕು ಪ್ರಕರಣ ದಾಖಲಾಗುತ್ತಿದೆ. ಇನ್ನಾದರೂ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು. .
ಪಠ್ಯ ಪುಸ್ತಕದಿಂದ ಟಿಪ್ಪು ವಿಷಯವನ್ನು ತೆಗೆದುಹಾಕಿರುವುದು ಸರಿಯಲ್ಲ, ಆತನೊಬ್ಬ ಹೋರಾಟಗಾರ. ತನ್ನ ಇಬ್ಬರು ಮಕ್ಕಳನ್ನೇ ಒತ್ತೆಯಾಗಿಟ್ಟು, ಬ್ರಿಟೀಷರ ವಿರುದ್ಧ ಹೋರಾಡಿದವನು. ಟಿಪುö್ಪವಿನ ವಿಷಯವನ್ನು ಪಠ್ಯದಿಂದ ಯಾವುದೇ ಕಾರಣಕ್ಕೂ ತೆಗೆಯಬಾರದು ಎಂದು ಆಗ್ರಹಿಸಿದರು. ಸರ್ಕಾರ ಯಾವುದೇ ಕಾರಣಕ್ಕೂ ಆನ್‌ಲೈನ್ ಶಿಕ್ಷಣ ಜಾರಿಗೆ ತರಬಾರದು. ಆನ್‌ಲೈನ್ ಶಿಕ್ಷಣಕ್ಕೆ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್ ಗಳ ಅವಶ್ಯಕತೆಯಿದೆ. ಅದನ್ನು ತೆಗೆದುಕೊಳ್ಳುವುದಕ್ಕೆ ೫೦ ಸಾವಿರಗಳಾದರೂ ಹಣ ಬೇಕು. ಅಷ್ಟು ಹಣವನ್ನು ಬಡವರು ತರುವುದಾದರೂ ಎಲ್ಲಿಂದ, ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ಗಳೇ ಸಿಗುವುದಿಲ್ಲ, ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತವೆ. ಆದ ಕಾರಣ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಸರಿಯಾಗಿ ಹೊಂದುವುದಿಲ್ಲ, ಕೂಡಲೇ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಕೂಡ ಧರಿಸಿಲ್ಲ; ಕೊರೋನಾ ಸೋಂಕು ಹರಡುವಿಕೆ ತಡೆಯಲು ವಿಫಲವಾಗಿದೆ ಎಂದು ಆರೋಪಿಸಿದ ವಾಟಾಳ್ ನಾಗರಾಜ್ ಅವರೇ ಕೋವಿಡ್ ನಿಯಮಗಳನ್ನು ಪಾಲಿಸದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು. ಪ್ರತಿಭಟನೆಯಲ್ಲಿ ಅವರ ಬೆಂಬಲಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಟ್ಟಿಗೆ ನಿಂತಿದ್ದರು, ಅಲ್ಲದೆ ಹಲವು ಮಂದಿ ಮಾಸ್ಕ್ ಕೂಡ ಧರಿಸಿರಲಿಲ್ಲ, ಸಮಾಜಕ್ಕೆ ತಿಳಿಹೇಳಬೇಕಾದ ನಾಯಕರೇ ತಮ್ಮದೇ ಪ್ರತಿಭಟನೆಯಲ್ಲಿ ಈ ರೀತಿಯ ನಿರ್ಲಕ್ಷ÷್ಯದಿಂದ ವರ್ತಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಕಂಡು ಬಂದಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss