spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ‘ಪಾಸಿಟಿವ್’ ಬಂದ್ರೂ ಯೋಚನೆ ಪಾಸಿಟಿವ್ ಇರಲಿ ಎಂದರು ಸೋಂಕು ಮುಕ್ತ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಾಯರಿ

- Advertisement -Nitte

ಹರೀಶ ಕುಲ್ಕುಂದ

ಮಂಗಳೂರು: ಕೊರೋನಾ ಖಾಯಿಲೆ ಬಗ್ಗೆ ಭಯ ಬೇಡ… ಪಾಸಿಟಿವ್ ಬಂದರೆ ಸತ್ತೇ ಹೋಗುತ್ತೇವೆ ಎಂಬ ಭಾವನೆ ಬಿಡಿ.. ಹಾಗೆಂದು ನಿರ್ಲಕ್ಷ್ಯ ಮಾಡಬೇಡಿ… 60 ಹರೆಯದ ಹೊಸ್ತಿಲಲ್ಲಿರುವ ನಾನು ಸಕಾರಾತ್ಮಕ ಭಾವದೊಂದಿಗೆ ಕೊರೋನಾ ಸೋಂಕಿನಿಂದ ಮುಕ್ತಿ ಪಡೆದೆ…
ಇದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ  ಡಾ. ರಾಮಚಂದ್ರ ಬಾಯರಿ ಅವರ ಅನುಭವದ ಮಾತು.
ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದ ಜವಾಬ್ದಾರಿ ಹೊತ್ತು ಸೋಂಕಿತರ ಪತ್ತೆ, ಚಿಕಿತ್ಸೆ, ಐಸೋಲೇಶನ್, ಕ್ವಾರಂಟೈನ್, ಸೀಲ್‌ಡೌನ್ ಮುಂತಾದ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸುತ್ತಲೇ ಸ್ವತಃ ಕೊರೋನಾ ಬಾಧಿತರಾದ ಡಾ. ರಾಮಚಂದ್ರ ಬಾಯರಿ ಅವರು ಪ್ರಸ್ತುತ ಕ್ವಾರಂಟೈನ್‌ನಲ್ಲಿ ಇದ್ದಾರೆ. ಕೊರೋನಾ ಪಾಸಿಟಿವ್ ಬಂದ ಬಳಿಕ ಸರಕಾರಿ ಅಧಿಕಾರಿಯಾಗಿ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖಗೊಂಡು ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಡಾ. ಬಾಯರಿ ‘ಹೊಸ ದಿಗಂತ’ ಜತೆ ತಮ್ಮ ಅನುಭವ ಹಂಚಿಕೊಂಡರು.
ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ವೇಳೆಯಲ್ಲಿ ನನಗೂ ಜ್ವರ ಬಂದಾಗ ಕಾಣಿಸಿಕೊಳ್ಳುವ ಮೈಕೈ ನೋವಿನ ಅನುಭವವಾಯಿತು. ಕೊರೋನಾದ ಬೇರೆ ಯಾವುದೇ ಲಕ್ಷಣ ಇರಲಿಲ್ಲ. ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಬಂತು. ತಕ್ಷಣ ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್‌ಗೆ ದಾಖಲಾದೆ. ಕೊರೋನಾಗೆ ವಿಶೇಷ ಚಿಕಿತ್ಸೆ ಇಲ್ಲ. ವಿಟಮಿನ್ ಮಾತ್ರೆಗಳ ಜತೆ ಮೈಕೈ ನೋವಿಗೆ ಅರ್ಧ ಪ್ಯಾರಸೆಟಮಾಲ್ ಮಾತ್ರೆ ನೀಡುತ್ತಿದ್ದರು. ದೇಹದ ತಾಪಮಾನ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಗಂಟೆಗೊಮ್ಮೆ ಪರೀಕ್ಷಿಸುತ್ತಿದ್ದರು. 10  ದಿನಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಹೊತ್ತು ಹೊತ್ತಿಗೆ ತಿಂಡಿ, ಊಟ ಮಾಡುತ್ತಿದ್ದೆ. ಉಳಿದ ಅವಧಿಯಲ್ಲಿ ಮಲಗಿಕೊಂಡು ವಿಶ್ರಾಂತಿ ಪಡೆದೆ. ವೈರಸ್ ಬಾಧೆಗೆ ನಿದ್ರೆ, ವಿಶ್ರಾಂತಿ ಮುಖ್ಯ. 10 ದಿನದ ಬಳಿಕ ನೆಗೆಟಿವ್ ವರದಿ ಬಂತು. ಈಗ ಹೋಂ ಕ್ವಾರಂಟೈನ್‌ನಲ್ಲಿ ಮತ್ತೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಪಾಸಿಟಿವ್ ಬಂದು ಇದುವರೆಗೆ ಮೈಕೈ ನೋವು, ಸುಸ್ತು ಹೊರತುಪಡಿಸಿ ನನಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ ಎಂದು ಕೋವಿಡ್ ಸೋಂಕು ಮುಕ್ತಗೊಂಡ ಬಗೆಯನ್ನು ವಿವರಿಸಿದರು.
ಕೊರೋನಾ ಎಂದಾಕ್ಷಣ ಈಗ ಹೆದರಿಕೆಯೇ ಜಾಸ್ತಿಯಾಗಿದೆ. ಈ ಸೋಂಕಿನ ಬಗ್ಗೆ ಭಯವನ್ನು ಮೊದಲು ಬಿಟ್ಟು ಬಿಡಬೇಕು. ಆದರೆ, ಸದಾ ಜಾಗೃತೆ ವಹಿಸಬೇಕು. 50  ವರ್ಷ ವಯಸ್ಸು ಮೇಲ್ಪಟ್ಟವರು ಹೈ ರಿಸ್ಕ್ ಗ್ರೂಪ್ ಎಂದು ಪರಿಗಣಿಸಲಾಗಿದೆ. ಜತೆಗೆ ಶ್ವಾಸಕೋಶ ಸಮಸ್ಯೆ, ಅಸ್ತಮಾ, ಡಯಾಬಿಟೀಸ್, ರಕ್ತದೊತ್ತಡ, ದೀರ್ಘಕಾಲದ ಕೆಮ್ಮು, ಕಫದ ಸಮಸ್ಯೆ ಇರುವವರು, ಮದ್ಯಪಾನಿಗಳು ಹೆಚ್ಚಿನ ಜಾಗೃತೆ ವಹಿಸಬೇಕು ಎನ್ನುವ ಸಲಹೆ ಅವರದ್ದು.
ಕೊರೋನಾ ಸೋಂಕಿತನಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ವೈದ್ಯನಾದ ನನಗೂ ಹಲವಾರು ಮಂದಿ ಹಿತೈಷಿಗಳು, ಗೆಳೆಯರು ಕರೆ ಮಾಡಿ ಧೈರ್ಯದ ಮಾತುಗಳನ್ನಾಡಿದ್ದರು. ಇಂತಹ ಸಕಾರಾತ್ಮಕವಾದ , ಆತ್ಮವಿಶ್ವಾಸ ಹೆಚ್ಚಿ ಸುವ ನುಡಿಗಳು ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಕೊರೋನಾ ಅಂದರೆ ಅಂತಹ ಮಹಾ ಏನಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಮೂಡಿದಾಗ ನಮ್ಮ ದೇಹ ಸಹಜವಾಗಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತದೆ. ಹೆದರಿದರೆ ಮನಸ್ಸು ಕುಗ್ಗಿ ನಾವು ಮತ್ತಷ್ಟು ಕಂಗಾಲಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಡಾ.ರಾಮಚಂದ್ರ ಬಾಯರಿ.
ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಿ
ಕೊರೋನಾ ಸೋಂಕಿನ ಲಕ್ಷಣ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರಬಹುದು. ಕೊರೋನಾ ಸೋಂಕಿತರು ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎಂದ ಮಾತ್ರಕ್ಕೆ ಎಲ್ಲರೂ ಈ ಸೋಂಕನ್ನು ನಿರ್ಲಕ್ಷ್ಯ ಮಾಡದಿರಿ. ಭಯ ಅನವಶ್ಯ ಎಂದ ಮಾತ್ರಕ್ಕೆ ಹಗುರವಾಗಿ ತೆಗೆದುಕೊಳ್ಳಬಾರದು. ಒಬ್ಬರಿಗಿಂತ ಇನ್ನೊಬ್ಬರ ದೇಹ ಪ್ರಕೃತಿ ಬೇರೆ ಬೇರೆಯಾಗಿರುತ್ತದೆ. ರೋಗ ಲಕ್ಷಣ ಇರುವ 50 ವರ್ಷ ಮೇಲ್ಪಟ್ಟವರು ವೈದ್ಯರ ಮಾರ್ಗದರ್ಶನದಂತೆ ಮುಂದುವರೆಯಬೇಕು. ವಿಶ್ರಾಂತಿ, ನಿದ್ರೆ, ಹಣ್ಣು, ಪೌಷ್ಠಿಕ ಆಹಾರ ಸೇವನೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಿ.
ಡಾ. ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss