ಗಂಗೊಳ್ಳಿ : ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಯ ಮನೆ ಸೀಲ್ ಡೌನ್ ಮಾಡಲು ಹೋದ ಸಂದರ್ಭ ಮಹಿಳೆಯೋರ್ವಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಗುರುವಾರ ಗಂಗೊಳ್ಳಿಯಲ್ಲಿ ನಡೆದಿದೆ.
ಗಂಗೊಳ್ಳಿಯ ಲೈಟ್ಹೌಸ್ ಸಮೀಪದ ಸೌತೆಬೆಟ್ಟು ಎಂಬಲ್ಲಿನ ವ್ಯಕ್ತಿಯೋರ್ವರಿಗೆ ಬುಧವಾರ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಸರಕಾರದ ನಿಯಮದಂತೆ ಸೋಂಕಿತರ ಮನೆ ಸೀಲ್ಡೌನ್ ಮಾಡಲು ಗುರುವಾರ ಬೆಳಿಗ್ಗೆ ಅಧಿಕಾರಿಗಳು ತೆರಳಿದ್ದರು. ಅಧಿಕಾರಿಗಳನ್ನು ನೋಡಿದ ಸೋಂಕಿತರ ಪತ್ನಿ ಸೀಮೆಎಣ್ಣೆ ಕ್ಯಾನ್ ತಂದು ಮೈಮೇಲೆ ಸುರಿದುಕೊಂಡು ಮನೆಯ ಒಳಗೆ ನೆಲದ ಮೇಲೆ ಹೊರಳಾಡಿ ಬೊಬ್ಬೆ ಹೊಡೆದು ಆತ್ಮಹತ್ಯೆಗೆ ಯತ್ನಿಸಿದರು.
ಇದೇ ಸಂದರ್ಭ ಮನೆಯಲ್ಲಿದ್ದ ಈಕೆಯ ಮಗಳು ಸೀಲ್ಡೌನ್ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮನೆಯನ್ನು ಸೀಲ್ಡೌನ್ ಮಾಡದಂತೆ ಒತ್ತಾಯಿಸಿದರು. ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡ ಮಹಿಳೆಯ ಮನವೊಲಿಸಿ ಸಮಾಧಾನಪಡಿಸಲು ಅಧಿಕಾರಿಗಳು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಮಹಿಳೆಯ ವರ್ತನೆ ನೋಡಿ ತಬ್ಬಿಬ್ಬಾದ ಅಧಿಕಾರಿಗಳು ಬಳಿಕ ಉಪಾಯವಿಲ್ಲದೆ ಅಲ್ಲಿಂದ ತೆರಳಿದರು.
ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ, ಗ್ರಾಪಂ ಕಾರ್ಯದರ್ಶಿ ದಿನೇಶ ದೇವಾಡಿಗ, ಗಂಗೊಳ್ಳಿ ಪೊಲೀಸ್ ಠಾಣೆಯ ಎಚ್ಸಿ ನಾಗರಾಜ ಕುಲಾಲ್, ಕಿರಿಯ ಆರೋಗ್ಯ ಸಹಾಯಕಿ ಶ್ರೀದೇವಿ, ಗ್ರಾಪಂ ಸಿಬ್ಬಂದಿ ಸಂದೀಪ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.