Monday, August 15, 2022

Latest Posts

ಕೊರೋನಾ, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ

ಮೈಸೂರು: ಪ್ರವಾಹ, ಕೊರೋನಾದಂತಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹಾಗಾಗಿ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಪಕ್ಷನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಗುರುವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿoದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಅಕ್ರಮದಿಂದ, ಅಕ್ರಮ ಹಣದಿಂದ, ೨೦೦೮ರಲ್ಲಿ ಆಪರೇಷನ್ ಕಮಲ ಮಾಡಿದ್ದರು. ಈಗ ೨೦೧೯ರಲ್ಲಿ ಮತ್ತೆ ಆಪರೇಷನ್ ಕಮಲ ನಡೆಸಿ,ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಖರೀದಿಸಿ, ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಇದು ಅನೈತಿಕ ಸರ್ಕಾರ, ಈ ಸರ್ಕಾರಕ್ಕೆ ಜನರ ಬೆಂಬಲವಿಲ್ಲ, ಬಹುಮತವನ್ನೂ ಜನರು ಕೊಟ್ಟಿರಲಿಲ್ಲ, ಆದರೂ ಕೂಡ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೂರು ಗಂಡಾoತರಗಳು ಬಂದವು. ಮೊದಲು ಪ್ರವಾಹ ಬಂದು ಒಂದು ಲಕ್ಷ ಕೋಟಿ ರೂ ನಷ್ಟವಾಗಿ, ಜನರು ಮನೆ, ಮಠ, ಬೆಳೆ, ಜಾನುವಾರುಗಳನ್ನು ಕಳೆದುಕೊಂಡರು. ಸಿಎಂ ಯಡಿಯೂರಪ್ಪ ೫೦ ಸಾವಿರ ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರಕ್ಕೆ ೩೫ ಸಾವಿರ ಕೋಟಿ ರೂ ಪರಿಹಾರ ಕೇಳಿದರು. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ೧೮೦೦ ಕೋಟಿ ರೂ ಮಾತ್ರ. ಕೇಂದ್ರದಿoದ ಪರಿಹಾರ ತರಲು ವಿಫಲರಾದರು. ಆ ನಂತರ ಭೀಕರ ಬರಗಾಲ ಪರಿಸ್ಥಿತಿ ಎದುರಾಯಿತು. ಅದನ್ನೂ ಸಮರ್ಥವಾಗಿ ಎದುರಿಸಲಿಲ್ಲ, ಈಗ ಕೊರೋನಾ ಸಂಕಷ್ಟದ ಪರಿಸ್ಥಿತಿಯನ್ನೂ ನಿಭಾಯಿಸಲು ವಿಫಲರಾಗಿದ್ದಾರೆ. ದೆಹಲಿ, ಮಧ್ಯ ಪ್ರದೇಶ ಸರ್ಕಾರಗಳು ಕೊರೋನಾವನ್ನು ನಿಯಂತ್ರಿಸುತ್ತಿವೆ. ಆದರೆ ನಮ್ಮ ರಾಜ್ಯ ಸರ್ಕಾರಕ್ಕೆ ಇದು ಸಾಧ್ಯವಾಗುತ್ತಿಲ್ಲ ಏಕೇ ಎಂದು ತರಾಟೆಗೆ ತೆಗೆದುಕೊಂಡರು.
ಕೊರೋನಾ ಕಿಟ್ ಖರೀದಿಯಲ್ಲಿ ೩ ಸಾವಿರ ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದೇ, ಈ ಮೊದಲು ಕಿಟ್ ಖರೀದಿ ಮಾಡಿರುವುದೇ ೧೨೬ ಕೋಟಿ ರೂಗೆ, ಭ್ರಷ್ಟಚಾರ ನಡೆಯಲು ಹೇಗೆ ಸಾಧ್ಯ ಎನ್ನುತ್ತಿದ್ದ ಸಚಿವರುಗಳು ಮೊನ್ನೆ ಕಿಟ್ ಖರೀದಿಗೆ ೨೧೧೮ ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಕೇವಲ ೧೫ ದಿನಗಳಲ್ಲಿ ಇಷ್ಟೋಂದು ವೆಚ್ಚ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳಿಲ್ಲ, ಆಕ್ಸಿಜನ್ ಸಿಗುತ್ತಿಲ್ಲ, ಸೋಂಕಿತರನ್ನು ದಾಖಲು ಮಾಡಿಕೊಳ್ಳುತ್ತಿಲ್ಲ, ಹಾಗಾಗಿ ಖರೀದಿಯ ಬಗ್ಗೆ ಲೆಕ್ಕ ಕೇಳುತ್ತಿದ್ದೇವೆ, ಸರ್ಕಾರ ಕೊಡಲೇಬೇಕು ಎಂದು ಆಗ್ರಹಿಸಿದರು.
ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ: ಬಿಜೆಪಿ ಸರ್ಕಾರ ಜನ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರುತ್ತಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೊಳಿಸಿದ್ದಾರೆ. ಇದರಿಂದಾಗಿ ವಸ್ತುಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು, ಎಷ್ಟು ಬೇಕಾದರೂ ದಾಸ್ತಾನು ಮಾಡಿಟ್ಟುಕೊಳ್ಳಬಹುದು ಎಂಬoತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌಸಿಂಗ್ ಸೋಸೈಟಿ ಲಾಭಿಗೆ ಮಣಿದಿರುವ ಬಿಜೆಪಿ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ, ಜಾರಿಗೊಳಿಸುವ ಮೂಲಕ ಬಾಕಿಯಿದ್ದ ಬಿಲ್ರ‍್ಸ್ಗಳ ೧೩,೮೧೪ ಕೇಸ್‌ಗಳನ್ನು ವಜಾ ಆಗುವಂತೆ ಮಾಡಿ, ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಹಣವುಳ್ಳವರೇ ಈಗ ಭೂಮಿಯ ಒಡೆಯ ಎಂಬoತಾಗಿದೆ. ಕೃಷಿ ಭೂಮಿ, ಖುಷ್ಕಿ ಭೂಮಿಗಳನ್ನು ಖರೀದಿಸುವ ಬಂಡವಾಳ ಶಾಹಿಗಳು ಅಲ್ಲಿ ಬೆಳೆಗಳನ್ನು ಬೆಳೆಯುವುದಿಲ್ಲ, ಬದಲಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಾರೆ. ಜಮೀನ್ದಾರಿ, ಜಹಗೀರ್‌ದಾರ್ ಪದ್ಧತಿ ಮತ್ತೊಮ್ಮೆ ಜಾರಿಗೆ ಬಂದರೂ ಆಶ್ಚರ್ಯವಿಲ್ಲ ಎಂದರು. ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಜಾರಿಗೊಳಿಸುವ ಮೂಲಕ ಬಂಡವಾಳ ಶಾಹಿಗಳ ಪರವಾಗಿ ನಿಂತಿದೆ. ಈ ಸರ್ಕಾರ ಬಡ ಜನರ, ಕಾರ್ಮಿಕರ, ರೈತರ ವಿರೋಧಿ ಸರ್ಕಾರವಾಗಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉಪಾಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನಕಾರ್ಯದರ್ಶಿ ಲೋಕೇಶ್ ಬಾಬು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss