ಮಂಡ್ಯ : ಕೊರೋನಾ ಬಗ್ಗೆ ಯಾರಿಗೂ ಭಯ ಬೇಡ, ಆದರೆ ಮುಂಜಾಗ್ರತೆ ವಹಿಸುವ ಮೂಲಕ ರೋಗ ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಶಿವಾನಂದ ತಿಳಿಸಿದರು.
ಎಂಓಬಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಯತ್ತಗದಹಳ್ಳಿ ರಸ್ತೆಯಲ್ಲಿರುವ ಕೇಂದ್ರದ ಸಭಾಂಗಣದಲ್ಲಿ ನಡೆದ ಕೊರೋನಾ ಹಿನ್ನಲೆಯಲ್ಲಿ ಅಂಗವಿಕಲರಿಗಾಗಿ ವಕಾಲತ್ತು ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಲೇರಿಯಾ, ಡೆಂಗ್ಯೂ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳ ಜೊತೆಗೆ ಕೊರೋನಾ ಸೋಂಕು ಸಹ ಸಾಂಕ್ರಾಮಿಕ ರೋಗವಾಗಿದೆ. ಇದು ಸಮುದಾಯಕ್ಕೆ ಬಹು ಬೇಗನೇ ಹರಡುವ ಕಾಯಿಲೆಯಾಗಿದೆ. 2019ರ ನವೆಂಬರ್ನಲ್ಲಿ ಚೈನಾದ ಊಹಾನ್ ಪ್ರಾಂತ್ಯದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದೆ. ನಂತರ ಹಂತ ಹಂತವಾಗಿ ಜಗತ್ತಿನಾದ್ಯಂತ ಹರಡಿದೆ ಎಂದು ವಿವರಿಸಿದರು.
ಇದರಿಂದ ಲಕ್ಷಾಂತರ ಸಾವು-ನೋವುಗಳಾಗಿವೆ. ಇದು ಕಿರೀಟದಂತಿರುವ ವೈರಸ್ ಆಗಿರುವುದರಿಂದ ಕೊರೋನಾ ಎಂದು ಹೆಸರಿಡಲಾಗಿದೆ. ಮನುಷ್ಯನ ದೇಹಕ್ಕೆ ಸೇರಿ ರಕ್ತದೊತ್ತಡ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ ಎಂದು ಹೇಳಿದರು.
ಸೋಂಕಿಗೆ ಒಳಗಾದ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅದರ ತುಂತುರು ಹನಿಗಳು ಆರೋಗ್ಯವಂತ ವ್ಯಕ್ತಿಗೆ ಸೇರಿದಾಗ ಇದು ಹರಡುತ್ತದೆ. ಸೋಂಕಿತ ಕೈಗಳಿಂದ ಕಣ್ಣು, ಬಾಯಿ, ಮೂಗು ಮುಟ್ಟಿಕೊಂಡಾಗಲೂ ರೋಗ ಹರಡುತ್ತದೆ. 14 ದಿನಗಳೊಳಗೆ ಯಾವಾಗ ಬೇಕಾದರೂ ಇದರ ರೋಗ ಲಕ್ಷಣಗಳು ಕಂಡುಬರುವ ಸಾಧ್ಯತೆಗಳಿವೆ. ತೀವ್ರವಾದಾಗ ರೋಗಿ ಸಾವು ಸಂಭವಿಸಲೂ ಬಹುದು ಎಂದು ಎಚ್ಚರಿಕೆ ನೀಡಿದರು.