ಕುಂಬಳೆ: ಕೊರೋನಾ ಬಾಧಿತೆಯಾದ ಯುವತಿಯನ್ನು ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಆಂಬ್ಯುಲೆನ್ಸ್ ಚಾಲಕ ನೌಫಲ್ ಎಂಬಾತ ಅತ್ಯಾಚಾರ ಎಸಗಿದ ನಾಡನ್ನೇ ಬೆಚ್ಚಿಬೀಳಿಸಿದ ಕೃತ್ಯವನ್ನು ಖಂಡಿಸಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗ ವಿಶ್ವ ಹಿಂದು ಪರಿಷತ್, ಬಜರಂಗ ದಳ ಮಾತೃಶಕ್ತಿ , ದುರ್ಗಾವಾಹಿನಿ ಇವುಗಳ ಮಂಜೇಶ್ವರ ಪ್ರಖಂಡ ಸಮಿತಿಗಳ ವತಿಯಿಂದ ಮಂಗಳವಾರ ಸಂಜೆ ಬೃಹತ್ ಪ್ರತಿಭಟನೆ ನಡೆಯಿತು.
ನಯಾಬಜಾರ್ ನಲ್ಲಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಜರಗಿದ ಪ್ರತಿಭಟನೆಯನ್ನು ಧಾರ್ಮಿಕ ಮುಂದಾಳು ರವೀಶ ತಂತ್ರಿ ಕುಂಟಾರು ಉದ್ಘಾಟಿಸಿ ಮಾತನಾಡಿ, ಕೇರಳದ ಎಡರಂಗ ಸರಕಾರದ ಆಡಳಿತದ ಕಾಲದಲ್ಲಿ ಗೂಂಡಾ ಮಾಫಿಯಾ, ಮಾದಕ ದ್ರವ್ಯ ಜಾಲಾ, ಕಳ್ಳ ಸಾಗಾಟದ ವ್ಯಕ್ತಿಗಳನ್ನು ವಿವಿಧ ಇಲಾಖೆಗಳಲ್ಲಿ ಸೇರ್ಪಡಿಸಿ ಸರಕಾರಿ ಉದ್ಯೋಗ ನೀಡಲಾಗುತ್ತಿದೆ. ಆರೋಪಿಗಳ ಪೂರ್ವಾಪರ ತಿಳಿಯದೆ ಇರುವುದರಿಂದ ಇಂತಹ ನೀಚ ಕೃತ್ಯಗಳು ಅಧಿಕವಾಗಲು ಕಾರಣ ಎಂದು ಆರೋಪಿಸಿದರು. ಕೋವಿಡ್ ಕಾಲದಲ್ಲಿ ಜನ ಸಾಮಾನ್ಯರಿಗೆ ಭದ್ರತೆ ನೀಡಬೇಕಾದ ಸರಕಾರವು ಇದೀಗ ವಂಚಕರನ್ನು , ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಹೆಣ್ಮಕ್ಕಳನ್ನು ಗೌರವಿಸುವ ವಿಶ್ವ ಹಿಂದು ಪರಿಷತ್ ಹಾಗೂ ಸಹ ಸಂಘಟನೆಗಳು ಈ ನೀಚ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದು , ಕಾಮಾಂಧ ಆರೋಪಿಗೆ ಕಠಿಣ ಶಿಕ್ಷೆ ನೀಡದಿದ್ದರೆ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ವಿಶ್ವ ಹಿಂದು ಪರಿಷತ್ ಮಂಜೇಶ್ವರ ಪ್ರಖಂಡ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ ವಹಿಸಿದ್ದರು. ವಿಹಿಂಪ ಕಾಸರಗೋಡು ಜಿಲ್ಲಾ ಸತ್ಸಂಗ ಪ್ರಮುಖ್ ಜಯಾನಂದ ಕುಮಾರ್ ಹೊಸದುರ್ಗ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಂಕರ ಭಟ್ ಉಳುವಾನ, ಜಿಲ್ಲಾ ಸಹ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು , ಬಜರಂಗ ದಳ ಜಿಲ್ಲಾ ಸಹ ಸಂಚಾಲಕ ಪವನ್ ಕುಮಾರ್ ಅಂಗಡಿಪದವು, ವಿಹಿಂಪ ಪ್ರಖಂಡ ಕಾರ್ಯದರ್ಶಿ ಯಾದವ ಕೀರ್ತೇಶ್ವರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ , ಬಿಜೆಪಿ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಉಪಾಧ್ಯಕ್ಷೆ ಜಯಂತಿ ಟಿ. ಶೆಟ್ಟಿ , ಸರೋಜಾ ಆರ್. ಬಲ್ಲಾಳ್, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಪಿ.ವಲ್ಸರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕೆ.ಐಲ್, ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ವಸಂತ ಮಯ್ಯ ತಿಂಬರ, ಯುವಮೋರ್ಚಾ ಮಂಡಲ ಉಪಾಧ್ಯಕ್ಷ ಕಿಶೋರ್ ಭಗವತೀ, ಸೇವಾ ಭಾರತಿ ಮಂಗಲ್ಪಾಡಿ ಇದರ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಒಡಂಬೆಟ್ಟು ಮೊದಲಾದವರು ಪಾಲ್ಗೊಂಡಿದ್ದರು.
ಮಾತೃ ಶಕ್ತಿ ಜಿಲ್ಲಾ ಪ್ರಮುಖ್ ಮೀರಾ ಆಳ್ವ ಬೇಕೂರು ಸ್ವಾಗತಿಸಿ, ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ವಂದಿಸಿದರು. ಪ್ರತಿಭಟನಾ ಸಭೆಗಿಂತ ಮೊದಲು ಕೈಕಂಬದಿಂದ ನಯಾಬಜಾರ್ ನಲ್ಲಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ತನಕ ಬೃಹತ್ ಪ್ರತಿಭಟನಾ ಮೆರವಣಿಗೆ ಜರಗಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.