ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಭೀತಿಯ ನಡುವೆಯೂ ರಾಜ್ಯ ಸರಕಾರ ಜ. 1ರ ಶುಕ್ರವಾರದಿಂದ ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳನ್ನು ಆರಂಭಿಸಲಿದೆ.
ಕಳೆದ 10 ತಿಂಗಳಿಂದ ಮೌನವಾಗಿದ್ದ ಶಾಲಾ ವಠಾರ ಮತ್ತೆ ಮಕ್ಕಳ ಕಲರವ ಕೆಳಲು ಶುರುವಾಗುವುದು. ನಾಳೆ ಮುಂಜಾಗ್ರತಾ ಕ್ರಮವಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಳ್ಳಲಿವೆ.
ಇತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಪೋಷಕರಲ್ಲಿ ಮನವಿ ಮಾಡಿದ್ದು, ಶಾಲೆಗೆ ಆಗಮಿಸುವ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು, ಎಲ್ಲ ಪೋಷಕರು ಮಕ್ಕಳನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳಿಸಿ, ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದ್ದಾರೆ.
ಮೊದಲ ದಿನ ವಿದ್ಯಾರ್ಥಿಗಳಿಗೆ ಮೊದಲ ಒಂದು ಗಂಟೆ ಕಾಲ ಪಾಠ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸೂಚನೆ ಕಳುಹಿಸಿದೆ. ಮಕ್ಕಳಿಗೆ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಪಾಠ ಮಾಡಲು ಇಲಾಖೆ ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಶಾಲಾ-ಕಾಲೇಜು ಆರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅನುಸರಿಸಬೇಕಾದಂತ ಬಹುಮುಖ್ಯ ಸೂಚನೆಗೆಳು ನೀಡಲಾಗಿದ್ದು, ಮಕ್ಕಳಿಗೆ ಶೀತ, ಜ್ವರ, ನೆಗಡಿಯಂತ ಲಕ್ಷಣಗಳಿದ್ದರೆ ಕಳಿಸುವುದು ಬೇಡ. ನಮಗೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಿಂತ ಅವರ ಆರೋಗ್ಯವೂ ಸಹ ಮುಖ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಾಲೆಗಳನ್ನು ಸ್ಯಾನಿಟೈಜೇಶನ್ ಮಾಡಲಾಗಿದೆ. ಪ್ರತಿ ಸಂಜೆಯೂ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಪ್ರತಿ ದಿನ ಮಕ್ಕಳ ಆರೋಗ್ಯದ ಕಡೆ ಓರ್ವ ಶಿಕ್ಷಕರು ಕಣ್ಗಾವಲು ಇಟ್ಟಿರುತ್ತಾರೆ. ರೋಗ ಲಕ್ಷಣವಿರುವುದು ಕಂಡು ಬಂದರೆ ಅಂತಹ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಮುಂದಿನ ಆರೋಗ್ಯ ತಪಾಸಣೆಯಂತಹ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಕ್ಕಳ ಸುರಕ್ಷಿತ ಶಿಕ್ಷಣಕ್ಕಾಗಿ ಆರೋಗ್ಯ, ಸಾರಿಗೆ, ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿವೆ. ಇಡೀ ರಾಜ್ಯ ಸರ್ಕಾರವೇ ನಿಮ್ಮ ಮಕ್ಕಳ ಹಿತದೃಷ್ಟಿಗೆ ಟೊಂಕ ಕಟ್ಟಿ ನಿಂತಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
10 ಮತ್ತು 12ನೇ ತರಗತಿಗಳ ಮಕ್ಕಳಿಗೆಲ್ಲಿ ಮಂಡಳಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ಪುಟ್ಟ ಪುಟ್ಟ ತಂಡಗಳಲ್ಲಿ ಸಾಮಾಜಿಕ ಅಂತರದಲ್ಲಿ ಆರಂಭಗೊಂಡರೆ, 6ರಿಂದ 9ನೇ ತರಗತಿಗಳ ಪರಿಷ್ಕೃತ ವಿದ್ಯಾಗಮ ತರಗತಿಗಳು ಸುರಕ್ಷಿತ ಶಾಲಾವರಣದಲ್ಲಿ ನಡೆಯಲಿವೆ.
ಶಾಲಾ ತರಗತಿ, ಶಾಲಾವರಣ ಸ್ವಚ್ಛವಾಗಿರಲಿದೆ. ಮಕ್ಕಳು ಗುಂಪು ಗೂಡುವುದಿಲ್ಲ, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಯಲಿದೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೋಷಕರ ಸಹಕಾರ ನಿಜಕ್ಕೂ ದೊಡ್ಡದು, ಮಕ್ಕಳ ಭವಿಷ್ಯವೂ ಇದರಲ್ಲಿ ಪ್ರಮುಖವಾಗಿರುವುದರಿಂದ ನಮ್ಮ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾಗಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ಕಳಿಸಿಕೊಡಿ, ಶಾಲಾ ತರಗತಿಗಳು ಕೆಲವೇ ಗಂಟೆಗಳ ಕಾಲ ನಡೆಯಲಿವೆ. ಆಯಾ ತರಗತಿಗಳಲ್ಲೇ ಬೆಳಗಿನ ಪ್ರಾರ್ಥನೆ ನಡೆಯಲಿವೆ. ಮಕ್ಕಳು ಗುಂಪುಗುಂಪಾಗಿ ಸೇರುವ ಪ್ರಮೇಯವೇ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ತಮ್ಮತಮ್ಮ ಭಾಗದ ಜನಪ್ರತಿನಿಧಿಗಳು ಶಾಲೆಗಳ ಆರಂಭದ ವಿಷಯದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ.
ಇನ್ನು ಚಂದನಾ ವಾಹಿನಿ ಮೂಲಕ ಪ್ರಸಾರವಾಗುವ ತರಗತಿಗಳು, ಯೂ-ಟ್ಯೂಬ್ ಪಾಠಗಳು ಎಂದಿನಂತೆ ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.