ಹೊಸದಿಗಂತ ವರದಿ, ಮಂಗಳೂರು:
ಕೇರಳ ಭಾಗದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಭಾಗದಿಂದ ಮಂಗಳೂರಿಗೆ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಕೋವಿಡ್-19 ಲಸಿಕೆಯ ಬಗ್ಗೆ ಪೂರ್ವ ತಯಾರಿ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ನಗರ ಲಸಿಕಾ ಕಾರ್ಯಪಡೆಯ ಚಾಲನಾ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೋವಿಡ್ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚು ಮಾಡಲು ಉದ್ದೇಶಿಸಲಾಗಿದೆ. ಕಾಸರಗೋಡು ಕೇರಳದಿಂದ ಹೆಚ್ಚಿನ ಮಂದಿ ನಿತ್ಯ ವಿವಿಧ ಉದ್ದೇಶಗಳಿಗಾಗಿ ಮಂಗಳೂರಿಗೆ ಬರುತ್ತಾರೆ. ಸೋಂಕು ತಡೆಯುವ ನಿಟ್ಟಿನಲ್ಲಿ ಕೋವಿಡ್ ಕಡ್ಡಾಯ ಪರೀಕ್ಷೆ ಅನಿವಾರ್ಯ ಎಂದರು.