Thursday, August 18, 2022

Latest Posts

ಕೊರೋನಾ ಭೀತಿ ನಡುವೆಯೂ ಏರಿಕೆಯಾಗುತ್ತಿದೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರ ಸಂಖ್ಯೆ

ಹೊಸ ದಿಗಂತ ವರದಿ , ಮೈಸೂರು:

ಅರಮನೆ ನಗರಿ ಮೈಸೂರಿನ ಹೊರವಲಯದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ವಿಮಾನದ ಮೂಲಕ ಪ್ರಯಾಣಿಸುವವರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಮಹಾಮಾರಿ ಕೊರೋನಾ ತಗಲುವ ಭೀತಿಯಿಂದ ಸಾರ್ವಜನಿಕರ ಬಸ್, ರೈಲುಗಳ ಬಳಕೆಗೆ ಹಿಂದೇಟು ಹಾಕುವ ಜನರು, ಇದೀಗ ತಮ್ಮ ಪ್ರಯಾಣಕ್ಕಾಗಿ ವಿಮಾನವನ್ನು ಅವಲಂಭಿಸತೊಡಗಿದ್ದಾರೆ. ಇದರಿಂದಾಗಿ ಅನ್ ಲಾಕ್‌ನ ವಿವಿಧ ಹಂತಗಳು ಜಾರಿಯಾದ ಬಳಿಕ ಮೈಸೂರಿನಿಂದ ಬೆಂಗಳೂರು, ಚೆನ್ನೆ, ಹೈದರಾಬಾದ್, ಗೋವಾ ಮುಂತಾದ ಸ್ಥಳಗಳಿಗೆ ವಿಮಾನದ ಮೂಲಕ ಪ್ರಯಾಣಿಸುತ್ತಿರುವವರ ಸಂಖ್ಯೆ ಹಂತ,ಹoತವಾಗಿ ಹೆಚ್ಚಳವಾಗುತ್ತಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಅಕ್ಟೋಬರ್ ತಿಂಗಳಲ್ಲಿ ೬ ಸಾವಿರಕ್ಕೂ ಅಧಿಕ ಪ್ರಯಾಣಿಕರು ದೇಶದ ನಾನಾ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಕೇವಲ ೪೮೯ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರೆ, ಅಕ್ಟೋಬರ್ ನಲ್ಲಿ ೬೭೭೯ಕ್ಕೆ ಏರಿಕೆಯಾಗಿದೆ ಎಂದು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಕೊರೊನಾ ಹಿನ್ನೆಲೆ ಮಾರ್ಚ್ ೨೦ರ ನಂತರ ದೇಶದಲ್ಲಿ ದೇಶೀಯ ಹಾಗೂ ಅಂತಾರಾಷ್ಟಿಯ ವಿಮಾನ ಸೇವೆ ಮೇಲೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿತ್ತು. ಮೇ ತಿಂಗಳಲ್ಲಿ ದೇಶೀಯ ವಿಮಾನ ಪ್ರಯಾಣಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿತು. ಆದರೆ, ಕೊರೋನಾ ಸೋಂಕು ತಗುಲುವ ಭೀತಿಯಿಂದಾಗಿ ಜನರು ವಿಮಾನ ಪ್ರಯಾಣ ಮಾಡಲಿಲ್ಲ. ಈಗ ಕೊರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಕ್ಷೀಣಿಸುತ್ತಿರುವ ಬೆಳವಣಿಗೆ ನಡುವೆ ಹಂತ,ಹoತವಾಗಿ ವಿಮಾನ ಪ್ರಯಾಣಿಕರ ಸಂಖ್ಯೆ ವೃದ್ಧಿಯಾಗಿದೆ. ಮೇ ತಿಂಗಳಲ್ಲಿ ೪೮೯ ಪ್ರಯಾಣಿಕರು ಮೈಸೂರಿನಿಂದ ಪ್ರಯಾಣಿಸಿದ್ದಾರೆ. ಜೂನ್ ನಲ್ಲಿ ೩೧೫೮, ಜುಲೈನಲ್ಲಿ ೨೭೯೫, ಆಗಸ್ಟ್ ನಲ್ಲಿ ೩೦೫೭, ಸೆಪ್ಟೆಂಬರ್ ನಲ್ಲಿ ೬೨೧೪ ಹಾಗೂ ಅಕ್ಟೋಬರ್ ನಲ್ಲಿ ೬೭೭೯ ಪ್ರಯಾಣಿಕರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!