ಧಾರವಾಡ: ಕೊರೋನಾ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚಳದ ಹಿನ್ನಲೆಯಲ್ಲಿ ಸೋಂಕು ಹತೋಟಿಗೆ ವಿದ್ಯಾಕಾಶಿ ಖ್ಯಾತಿಯ ಧಾರವಾಡ ಜಿಲ್ಲೆಯಾದ್ಯಂತ ಜು.15ರ ಬೆಳಿಗ್ಗೆ 10ರಿಂದ ಜು.24ರ ರಾತ್ರಿ 8ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆಗೆ ವಿಡಿಯೋ ಸಂವಾದ ನಡೆಸಿದಾಗ ಲಾಕ್ಡೌನ್ ಘೋಷಣೆ ಜಿಲ್ಲಾಡಳಿತಕ್ಕೆ ಬಿಟ್ಟ ಹಿನ್ನಲೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ನಿರ್ಮಾಣ ಕಾಮಗಾರಿ, ಕೈಗಾರಿಕೆ ಚಟುವಟಿಕೆಗಳು, ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧಿಕೃತ ಆದೇಶ ಹೊರಡಿಸಲಿದ್ದಾರೆ. ಜಿಲ್ಲೆಯಿಂದ ಹೊರ ಹೋಗುವವರು ಹೋಗಲಿ. ಬೆಂಗಳೂರು ಮಾದರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚಳದ ಹಿನ್ನಲೆ ಅನೇಕ ಹಿರಿಯರ ಹಾಗೂ ತಜ್ಞರ, ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಿಯೇ ಲಾಕ್ಡೌನ್ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರು ಇದಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಲಾಕ್ಡೌನ್ ವೇಳೆ ಸಾರ್ವಜನಿಕರು ಸೋಂಕು ನಿವಾರಣೆ ಹಾಗೂ ಹತೋಟಿಗೆ ಸಾಮಾಜಿಕ ಅಂತರ ಕಾಯುವುದು, ಮಾಸ್ಕ್ ಧಾರಣೆ, ಸ್ಯಾನಿಟೈಜರ್ ಬಳಕೆ, ಆಗಾಗ್ಗೆ ಕೈತೊಳೆಯುವುದು ಬಿಡಬಾರದು. ಯಾವುದೇ ಕಾರಣಕ್ಕೆ ಕಣ್ಣು, ಕಿವಿ, ಮೂಗು, ಬಾಯಿ ಮುಟ್ಟಬಾರದು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಅಪಾರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಪಂ ಸಿಇಓ ಡಾ. ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಪೊಲೀಸ್ ಆಯುಕ್ತ ಆರ್.ದೀಲಿಪ್, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ಇದ್ದರು.