Sunday, August 14, 2022

Latest Posts

ಕೊರೋನಾ ಮಹಾಮಾರಿಗೆ ಬಿಎಸ್‍ಎಫ್ ಯೋಧ ಬಲಿ

ಮಡಿಕೇರಿ: ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೊಡಗು ಜಿಲ್ಲೆಯ ಯೋಧರೊಬ್ಬರು ಕೊರೋನಾಕ್ಕೆ ಬಲಿಯಾದ ಘಟನೆ ಗುರುವಾರ ಬೆಳಗ್ಗೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ವೀರಾಜಪೇಟೆ ಸಮೀಪದ ನಲ್ವತ್ತೊಕ್ಲು ಗ್ರಾಮದ ನಿವಾಸಿ ದುದ್ದಿಯಂಡ ಅಬ್ಬಾಸ್ ಮತ್ತು ಬಿಚ್ಚುಮ್ಮ ದಂಪತಿಗಳ ಪುತ್ರ ದುದ್ದಿಯಂಡ ಎ.ಮಜೀದ್(50) ಎಂಬವರೇ ಮೃತ ದುರ್ದೈವಿ ಯೋಧರಾಗಿದ್ದಾರೆ. ಭಾರತೀಯ ಗಡಿ ಭದ್ರತಾ ಪಡೆ(ಬಿ.ಎಸ್.ಎಫ್)ಯಲ್ಲಿ 30 ವರ್ಷಗಳ ಸುದೀರ್ಘವಾದ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ 31 ವರ್ಷಕ್ಕೆ ಕಾಲಿಡುತ್ತಿದ್ದಂತೆ, ಕರ್ತವ್ಯದಲ್ಲಿರುವಾಗಲೇ ಮಹಾಮಾರಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.
ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು, ಐವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಸೇರಿದಂತೆ ಬಂಧುವರ್ಗವನ್ನು ಅಗಲಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ 4 ವರ್ಷಗಳಿಂದ ಕೇರಳದ ತಿರುವನಂತಪುರಂನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಜೀದ್ ಅವರು, ಕಳೆದ ಆಗಸ್ಟ್ ತಿಂಗಳ ಅಂತ್ಯದವರೆಗೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ.
ಇದೇ ತಿಂಗಳ ಮೊದಲ ವಾರದಲ್ಲಿ ದಿಢೀರನೆ ಅವರಿಗೆ ಕೋವಿಡ್-19 ಸೋಂಕು ಧೃಡಪಟ್ಟ ಕಾರಣ, ತಿರುವನಂತಪುರಂನ ಮೆಡಿಕಲ್ ಕಾಲೇಜಿನಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಜ್ಞ ವೈದ್ಯರ ತಂಡ ನಿರಂತರವಾಗಿ ನೀಡಿದ ಚಿಕಿತ್ಸೆ ಆರಂಭದಲ್ಲಿ ಫಲ ಕಾಣದಿದ್ದಾಗ ಪ್ಲಾಸ್ಮ ತೆರಪಿ ಮೂಲಕ ಚಿಕಿತ್ಸೆ ಮುಂದುವರಿಸಲಾಗಿತ್ತು. ಇದರಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದ ಮಜೀದ್ ಅವರಿಗೆ ತಮ್ಮ ಬಹು ಅಂಗಾಂಗ ವೈಫಲ್ಯ ಕೂಡ ಕಾಡತೊಡಗಿತು. ತಮ್ಮ ಎರಡೂ ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆ ವೃದ್ಧಿಸಿದ ಪರಿಣಾಮ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಜೀದ್ ಅವರು, ಯಾವುದೇ ಉನ್ನತ ಮಟ್ಟದ ಚಿಕಿತ್ಸೆಗೂ ಸ್ಪಂದಿಸದೆ ಗುರುವಾರ ಬೆಳಗ್ಗೆ 7 ಗಂಟೆಗೆ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾದರು.
ತಮ್ಮ ಇಬ್ಬರು ಪುತ್ರರಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಕನಸು ಕಂಡಿದ್ದ ಮೃತ ಯೋಧ ಮಜೀದ್ ಅವರು ಅದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದರು. ಮಕ್ಕಳ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದ ಮಜೀದ್ ಕಂಡ ಕನಸು ನನಸಾಗುವುದನ್ನು ಕಣ್ಣಾರೆ ನೋಡಲು ಸಾಧ್ಯವಾಗದೆ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದು ಕುಟುಂಬಸ್ಥರನ್ನು ಮತ್ತಷ್ಟು ದುಃಖಿತರನ್ನಾಗಿಸಿದೆ.
ಕೆ.ಎಂ.ಎ. ಸಂತಾಪ: ಕೊಡವ ಮುಸ್ಲಿಂ ಅಸೋಸಿಯೇಷನ್‍ನ (ಕೆ.ಎಂ.ಎ.) ಸದಸ್ಯರಾಗಿದ್ದ ದುದ್ದಿಯಂಡ ಎ. ಮಜೀದ್ ಅವರ ನಿಧನಕ್ಕೆ ಕೆ.ಎಂ.ಎ. ತೀವ್ರ ಸಂತಾಪ ಸೂಚಿಸಿದೆ.
ಮೃತ ಯೋಧ ಮಜೀದ್ ಅವರಿಗೆ ಕೋವಿಡ್ ಬಾಧಿಸಿದ್ದ ಕಾರಣ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲು ಸಾಧ್ಯವಾಗುತ್ತಿಲ್ಲ. ಅವರ ಹುಟ್ಟೂರಿನ ಜಮಾಅತ್ ಆದ ವೀರಾಜಪೇಟೆ ಸಮೀಪದ ನಲ್ವತ್ತೊಕ್ಲು ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ನಿರಾಕ್ಷೇಪದಂತೆ ತಿರುವನಂತಪುರಂನಲ್ಲೇ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಕರ್ತವ್ಯದಲ್ಲಿದ್ದ ಸಂದರ್ಭದಲ್ಲೇ ಮೃತರಾಗಿರುವ ಕಾರಣ ಸಕಲ ಸರಕಾರಿ ಗೌರವಗಳೊಂದಿಗೆ ಗುರುವಾರ ಮಧ್ಯಾಹ್ನದ ವೇಳೆಗೆ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಪಾರ್ಥಿವ ಶರೀರವನ್ನು ಮತ್ತೊಮ್ಮೆ ಆಂಟಿಜೆನ್ ಟೆಸ್ಟಿಗೆ ಒಳಪಡಿಸಲಾಗುವುದು. ಒಂದು ವೇಳೆ ಫಲಿತಾಂಶ ನೆಗೆಟಿವ್ ಬಂದಲ್ಲಿ ಮಜೀದ್ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಪಾಸಿಟಿವ್ ಬಂದರೆ ಇದು ಸಾಧ್ಯವಿಲ್ಲ ಎಂದು ಬಿಎಸ್‍ಎಫ್ ಮೂಲಗಳು ಕುಟುಂಬಸ್ಥರಿಗೆ ತಿಳಿಸಿವೆ. ಈ ಕುರಿತು ಯಾವುದೇ ಅಂತಿಮ ತೀರ್ಮಾನ ಇದುವರೆಗೂ ಆಗಿರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss