ಕಾಸರಗೋಡು: ಕಾಸರಗೋಡು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಇದರ ಅಂಗವಾಗಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಅತ್ಯಾಧುನಿಕ ಮಾದರಿಯ ಥರ್ಮಲ್ ಸ್ಕ್ರೀನಿಂಗ್ ಮೆಷಿನ್ ವ್ಯವಸ್ಥೆಯನ್ನು ಸ್ಥಾಪಿಸುವುದರ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ನೆರವೇರಿಸಿದರು.
ರಾಜ್ಯದಾದ್ಯಂತ ಪೊಲೀಸರು ಕೋವಿಡ್ ಬಗ್ಗೆ ನಿಗಾ ಇರಿಸುವುದರ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಮುಂದೆ ಠಾಣೆಗಳಿಗೆ ಪ್ರವೇಶಿಸುವುದರ ಮೊದಲು ಎಲ್ಲ ಪೊಲೀಸರು ಥರ್ಮಲ್ ಸ್ಕ್ಯಾನಿಂಗ್ ಗೆ ಸ್ವತಹ ವಿಧೇಯರಾಗಬೇಕು. ಶರೀರದ ಉಷ್ಣತೆ ಹೆಚ್ಚಿರುವುದಾಗಿ ಗೋಚರಿಸಿದಲ್ಲಿ ಅಂತಹವರು ಠಾಣೆಗಳಿಗೆ ಪ್ರವೇಶಿಸಬಾರದು. ಇದೇ ವೇಳೆ ಅತೀ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿ ಮಾತ್ರವೇ ದೂರುದಾರರು ಸಹಿತ ಮತ್ತಿತರರನ್ನು ಠಾಣೆಗೆ ಪ್ರವೇಶಿಸಲು ಬಿಡಲಾಗುವುದು. ಇನ್ನು ಮುಂದೆ ಇದಕ್ಕಿಂತಲೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಕೇರಳದ ಎಲ್ಲ ಜಿಲ್ಲೆಗಳಲ್ಲೂ ಕಠಿಣ ನಿಬಂಧನೆಗಳನ್ನು ಅನುಸರಿಸಲಾಗಿದೆ. ಈ ಮಧ್ಯೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಥರ್ಮಲ್ ಸ್ಕ್ರೀನಿಂಗ್ ಮೆಷಿನ್ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.