Thursday, June 30, 2022

Latest Posts

ಕೊರೋನಾ ಮುಕ್ತವಾಗುವತ್ತ ದಕ್ಷಿಣ ಕನ್ನಡ : 70 ವರ್ಷದ ಸೋಂಕಿತ ವೃದ್ಧೆ ಆಸ್ಪತ್ರೆಯಿಂದ ಬಿಡುಗಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೊರೋನಾ ಮುಕ್ತವಾಗುವತ್ತ ಸಾಗುತ್ತಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ 70 ವರ್ಷದ ಕೊರೋನಾ ಸೋಂಕಿತ ವೃದ್ಧೆ ಭಾನುವಾರ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಶನಿವಾರ 10 ತಿಂಗಳ ಹಸುಳೆ ಕೊರೋನಾ ವಿರುದ್ಧ ಸೆಣಸಿ ಗುಣಮುಖಗೊಂಡು ಮನೆ, ಅಮ್ಮನ ಮಡಿಲು ಸೇರಿದ್ದು, ಭಾನುವಾರ ವೃದ್ದೆ ಕೊರೋನಾ ವಿರುದ್ಧದ ಸಮರದಲ್ಲಿ ಜಯಶಾಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಒಟ್ಟು 12 ಪಾಸಿಟಿವ್ ಪ್ರಕರಣಗಳ ಪೈಕಿ ಏಳು ಮಂದಿ ಗುಣಮುಖರಾಗಿ ಮನೆಗೆ ತೆರಳಿದಂತಾಗಿದೆ.
ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೇರಳ ಮೂಲದ 70 ವರ್ಷದ ವೃದ್ಧೆ ಸೌದಿ ಅರೇಬಿಯಾದಿಂದ ಮಾ.9ರಂದು ಕ್ಯಾಲಿಕಟ್‌ಗೆ ಆಗಮಿಸಿದ್ದರು. ಮಾ. 19ರಂದು ಚಿಕಿತ್ಸೆಗಾಗಿ ಮಂಗಳೂರಿಗೆ ಬಂದಿದ್ದರು. ಅವರಿಗೆ ಕೊರೋನಾ ಸೋಂಕು ತಗಲಿರುವುದು ಮಾ.24ರಂದು ಪರೀಕ್ಷಾ ವರದಿಯಿಂದ ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಏ. 7ಮತ್ತು 8ರಂದು ಗಂಟಲ ದ್ರವದ ಮಾದರಿಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
28 ಮಂದಿಯ ವರದಿ ನೆಗೆಟಿವ್ 
ಕೊರೋನಾ ಸಂಬಂಧಿಸಿ ದ.ಕ ಜಿಲ್ಲೆಯಲ್ಲಿ ಭಾನುವಾರ ದೊರೆತ 28ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ. ಭಾನುವಾರ ಹೊಸದಾಗಿ 26 ಮಂದಿಯ ಗಂಟಲ ದ್ರವದ ಮಾದರಿಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಪಡೆಯಲಾಗಿದೆ. 7ಮಂದಿಯನ್ನು ಅಬ್ಸರ್ವೇಶನ್ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಭಾನುವಾರ ಯಾರನ್ನೂ ಸ್ಕ್ರೀನಿಂಗ್ ನಡೆಸಿಲ್ಲ. 2103 ಮಂದಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 24 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈ ಪೈಕಿ ಒಬ್ಬರು ಹೊಸದಾಗಿ ಸೇರ್ಪಡೆಯಾದವರು. ಒಟ್ಟು 3970 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಅವಧಿಯನ್ನು ಭಾನುವಾರ ಪೂರೈಸಿದ್ದು, ಅವರಲ್ಲಿ ಕೊರೋನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇದುವರೆಗೆ 430 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಈ ಪೈಕಿ 12 ಪಾಸಿಟಿವ್, 418ನೆಗೆಟಿವ್, 5ಆ್ಯಕ್ಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss