ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ವೈರಸ್ ಮತ್ತೆ ವ್ಯಾಪಕವಾಗಿ ಹರಡಲಾರಂಭಿಸಿದೆ. ಕಾಸರಗೋಡು ನಗರಸಭೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಪರ್ಕದಿಂದ ರೋಗ ಬಾಧಿಸುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಕಾಸರಗೋಡು ನಗರಸಭೆ, ಮಧೂರು, ಕುಂಬಳೆ ಮುಂತಾದ ಗ್ರಾಮ ಪಂಚಾಯತ್ ಗಳಲ್ಲಿ ಸಂಪರ್ಕದಿಂದ ಕೋವಿಡ್ ವ್ಯಾಪಕಗೊಳ್ಳುತ್ತಿದೆ.
ಮೂರು ಹಂತಗಳ ಬಳಿಕ ಕೋವಿಡ್ ಬಾಧಿಸಿದವರಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಕಾಸರಗೋಡು ನಗರಸಭೆ ಹಾಗೂ ಚೆಮ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಾಗಿದೆ.
ಶನಿವಾರದ ವರೆಗಿನ ವರದಿಯ ಅನ್ವಯ ಕಾಸರಗೋಡು ನಗರಸಭೆ 58 ಹಾಗೂ ಚೆಮ್ನಾಡು ಗ್ರಾ.ಪಂ.ನಲ್ಲಿ 56 ಒಟ್ಟು ಸೋಂಕಿತರು ಪತ್ತೆಯಾಗಿದ್ದರು. ಎರಡನೇ ಹಂತದ ಕೋವಿಡ್ ಸಂದರ್ಭ ರಾಜ್ಯದಲ್ಲೇ ಅತೀ ಹೆಚ್ಚು ಸೋಂಕು ಬಾಧಿತರಿದ್ದ ಗ್ರಾ.ಪಂ. ಚೆಮ್ನಾಡು ಆಗಿದ್ದುದು ಇಲ್ಲಿ ಗಮನಾರ್ಹ ಸಂಗತಿ. ಮೂರು ಹಂತ ತನಕದ ಲಾಕ್ ಡೌನ್ ಸಂದರ್ಭಗಳಲ್ಲೂ ಅತೀ ಜಾಗೃತ ವಲಯಗಳಾಗಿದ್ದ ಕಾಸರಗೋಡು ನಗರಸಭೆ ಹಾಗೂ ಚೆಮ್ನಾಡು ಪಂಚಾಯತ್ ವಹಿಸಿದ್ದ ಕಾಳಜಿಯ ಪರಿಣಾಮ ಸಾಮುದಾಯಿಕ ಹರಡುವಿಕೆಯನ್ನು ಸಮರ್ಥವಾಗಿ ನಿಯಂತ್ರಿಸಲಾಗಿತ್ತು.
ಆದರೆ ಮೂರನೇ ಹಂತದಲ್ಲಿ ಅನ್ಯ ರಾಜ್ಯಗಳು ಮತ್ತು ಹೊರ ದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ ಕಾರಣ ಈ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ತೀವ್ರಗೊಂಡಿದೆ. ಇದೇ ವೇಳೆ ಹೀಗೆ ಬಂದವರಲ್ಲಿ ಶೇಕಡಾ 50ರಷ್ಟು ಜನರು ಮಂಜೇಶ್ವರ ತಾಲೂಕು ವ್ಯಾಪ್ತಿಯ ವಿವಿಧಡೆಗಳ ನಿವಾಸಿಗಳಾಗಿದ್ದು , ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಇದೀಗ ತೀವ್ರ ಭಯಾತಂಕ ಕಂಡುಬರುತ್ತಿದೆ.
ಎರಡನೇ ಹಂತದ ಲಾಕ್ ಡೌನ್ ಸಂದರ್ಭ ಜಿಲ್ಲೆಯ 15 ಗ್ರಾ.ಪಂ.ಗಳು ಮತ್ತು ಎರಡು ನಗರಸಭೆಗಳಲ್ಲಿ ಮಾತ್ರ ಸೋಂಕಿತರಿದ್ದರು. ಮೂರನೇ ಹಂತದ ಲಾಕ್ ಡೌನ್ ವೇಳೆ 37 ಗ್ರಾ.ಪಂ. ಗಳಲ್ಲೂ ಮತ್ತು ಮೂರು ನಗರಸಭೆಗಳಲ್ಲೂ
ಜನರು ಅಪಾರ ಸಂಖ್ಯೆಯಲ್ಲಿ ರೋಗ ಬಾಧಿತರಾದರು.