ಕೊರೋನಾ ರೋಗಿಗಳು ಅತಿಶೀಘ್ರ ಗುಣಮುಖರಾಗಲಿ: ನಂದಿ ಹೋಗದಿರಲಿ ಬಡವರ ಆಶಾಕಿರಣ ವೆನ್ಲಾಕ್

0
69

ಮಂಗಳೂರು: ಬಡವರ ಆಶಾಕಿರಣವಾಗಿದ್ದ ವೆನ್ಲಾಕ್ ಆಸ್ಪತ್ರೆ ಈಗ ಸ್ಮಶಾನ ಮೌನವಾಗಿದೆ. ಅಲ್ಲಿ ರೋಗಿಗಳ ನರಳಾಟವಿಲ್ಲ, ಚೀತ್ಕಾರವಿಲ್ಲ. ಅತ್ತಿಂದಿತ್ತ ಚುರುಕಿನಿಂದ ಓಡಾಡುತ್ತಿದ್ದ ದಾದಿಯರ, ವೈದ್ಯರ ಹೆಜ್ಜೆ ಸಪ್ಪಳವಿಲ್ಲ.. ಬರಿಯ ಮೌನವಷ್ಟೇ…

ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೋನಾ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಮಾರಕ ಕಾಯಿಲೆ ಕೊರೋನಾ ಸೊಂಕಿತರಿಗಷ್ಟೇ ಇಲ್ಲಿ ಆರೈಕೆ ನಡೆಯುತ್ತಿದೆ. ಇದು ವರೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೊರೋನಾ ಭೀತಿಯಿಂದಾಗಿ ಆಸ್ಪತ್ರೆಯಲ್ಲಿದ್ದ ನೂರಾರು ಮಂದಿ
ಈಗಾಗಲೇ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆ ಸೇರಿದ್ದಾರೆ. ಇನ್ನುಳಿದವರು ಖಾಸಗಿ ಆಸ್ಪತ್ರೆ ಸೇರಿದ್ದಾರೆ.

ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು ಒಂದು ಸಾವಿರ ಹಾಸಿಗೆಗಳ ವ್ಯವಸ್ಥೆ, ಮಲ್ಟಿಸ್ಪೆಷಾಲಿಟಿ ಟೆರಿಟರಿ ಕೇರ್ ಸೌಲಭ್ಯಗಳನ್ನು ಒಳಗೊಂಡಿದ್ದು ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಸುತ್ತ ಮುತ್ತಲಿನ ಎಲ್ಲಾ ಜಿಲ್ಲೆಗಳ ಬಡವರ ಆಶಾಕಿರಣವಾಗಿತ್ತು. ಇದೀಗ ವೆನ್ಲಾಕ್ ಸದ್ಯದ ಮಟ್ಟಿಗೆ ಕೊರೋನಾ ರೋಗಿಗಳಿಗಾಗಿ ಜಿಲ್ಲಾಡಳಿತ ಮೀಸಲಿಟ್ಟಿರುವುದರಿಂದ ಇತರ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ.

ವೆನ್ಲಾಕ್‌ಗೆ 185 ವರ್ಷಗಳ ಇತಿಹಾಸ: 185 ವರ್ಷಗಳ ಇತಿಹಾಸವಿರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ಮಹತ್ತರವಾದ ಬದಲಾವಣೆಯಾಗಿದೆ. ಕೊರೋನಾ ಭೀತಿ ಅಷ್ಟರ ಮಟ್ಟಿಗೆ ಜಿಲ್ಲೆಯನ್ನು ಕಾಡಿದೆ. ಗಂಭೀರ ಸ್ವರೂಪದ ಈ ರೋಗಕ್ಕೆ ತುರ್ತಾಗಿ ಕಡಿವಾಣ ಹಾಕಲೇಬೇಕಿದೆ. ಆದರೆ ವೆನ್ಲಾಕ್ ಬದಲು ಬದಲಿ ಆಸ್ಪತ್ರೆಗಳನ್ನು ಬಳಸಬಹುದಿತ್ತು ಎಂಬ ಮಾತುಗಳೂ ಕೇಳಿ ಬರಲಾರಂಭಿಸಿವೆ.

ವೆನ್ಲಾಕ್ ಮಂಗಳೂರಿನ ಏಕೈಕ ದೊಡ್ಡ ಸರ್ಕಾರಿ ಆಸ್ಪತ್ರೆ. ಈ ಆಸ್ಪತ್ರೆಯನ್ನು ಬಳಸುವ ಬದಲು ಮೂಡುಶೆಡ್ಡೆಯ ಟಿಬಿ ಆಸ್ಪತ್ರೆ, ಮಣ್ಣ ಗುಡ್ಡೆಯ ಗ್ಲೋಬಲ್ ಆಸ್ಪತ್ರೆ ಅಥವಾ ಇನ್ಯಾವುದೋ ಆಸ್ಪತ್ರೆಯನ್ನು ದತ್ತು ಪಡೆದು ಬಳಸಬಹುದಿತ್ತು. ಬಡವರ ಆಸ್ಪತ್ರೆಯನ್ನು ಹಾಗೆಯೇ ಉಳಿಸಿಕೊಳ್ಳಬಹುದಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ.

ಇನ್ನು ಕನಿಷ್ಟವೆಂದರೂ ಮೂರು ತಿಂಗಳ ಕಾಲ ಇತರ ರೋಗಿಗಳಿಗೆ ವೆನ್ಲಾಕ್‌ಗೆ ಪ್ರವೇಶವಿಲ್ಲ. ಅದುವರೆಗೆ ವೆನ್ಲಾಕ್‌ ನಲ್ಲಿರುವ ಕೋಟ್ಯಂತರ ಮೌಲ್ಯದ ಯಂತ್ರೋಪಕರಣಗಳನ್ನು ಹಾಳಾಗದಂತೆ ಜಿಲ್ಲಾಡಳಿತ ಕಾಪಾಡಿಕೊಳ್ಳಬೇಕಿದೆ.
ಪ್ರತೀ ತಿಂಗಳು ಸರಾಸರಿ 59 ರಿಂದ 60 ಲಕ್ಷ ರೂಪಾಯಿಯನ್ನು ವೆನ್ಲಾಕ್ ಆಸ್ಪತ್ರೆಯು ಆಯುಷ್ಮಾನ್ ಯೋಜನೆಯಲ್ಲಿ ಗಳಿಸುತ್ತಿತ್ತು. ಇದು ಬಡವರ ಚಿಕಿತ್ಸೆಗಾಗಿ ಸರ್ಕಾರದ ನೆರವು ಈಗ ವೆನ್ಲಾಕ್‌ನ ಎಲ್ಲಾ ರೋಗಿಗಳು ಖಾಸಗಿಯ ಆಸ್ಪತ್ರೆಯಲ್ಲಿದ್ದಾರೆ. ಆದ್ದರಿಂದ ಇದು ಸದ್ಯದ ಮಟ್ಟಿಗೆ ಸ್ಥಗಿತವಾಗುವ ಸಾಧ್ಯತೆಯೂ ಇದೆ. ಬಡವರ ಆಶಾಕಿರಣವಾದ ಈ ಆಸ್ಪತ್ರೆಯ ಎಲ್ಲಾ ಸೌಲಭ್ಯಗಳು, ಯಂತ್ರೋಪ ಕರಣಗಳು, ಡಯಾಲಿಸಿಸ್ ಮಿಷಿನ್ ಹೀಗೆ ಪ್ರತಿಯೊಂದನ್ನೂ ಎಚ್ಚರಿಕೆಯಿಂದ ಕಾಪಾಡಬೇಕಿದೆ.

ಜಿಲ್ಲೆಯನ್ನು ಕಾಡುತ್ತಿರುವ ಕೊರೋನಾ ಆದಷ್ಟು ಬೇಗ ದೂರವಾಗಲಿ ವೆನ್ಲಾಕ್‌ ನಲ್ಲಿರುವ ಕೊರೋನಾ ಸೋಂಕಿತರು ಆದಷ್ಟು ಶೀಘ್ರ ಗುಣಮುಖರಾಗಿ ಜಿಲ್ಲೆ ನೆಮ್ಮದಿ ಉಸಿರು ಬಿಡುವಂತಾಗಲಿ. ವೆನ್ಲಾಕ್ ಆಸ್ಪತ್ರೆ ಸುಮಾರು ಒಂದು ಸಾವಿರ ಹಾಸಿಗೆಗಳ ವ್ಯವಸ್ಥೆ, ಮಲ್ಟಿ ಸ್ಪೆಷಾಲಿಟಿ ಟೆರಿಟರಿ ಕೇರ್ ಸೌಲಭ್ಯಗಳನ್ನು ಒಳಗೊಂಡಿದ್ದು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಸುತ್ತ ಮುತ್ತಲಿನ ಎಲ್ಲಾ ಜಿಲ್ಲೆಗಳ ಬಡವರ ಆಶಾಕಿರಣವಾಗಿದೆ.

LEAVE A REPLY

Please enter your comment!
Please enter your name here