ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಲಸಿಕೆ ಬಂತೆಂದು ಮೈಮರೆಯಬೇಡಿ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಇರಬೇಡಿ. ಲಸಿಕೆ ಪಡೆದ ಬಳಿಕವೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕಸ್ವದೇಶಿ ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ, ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಮಟ್ಟಹಾಕಲು ಬಹಳ ಕಡಿಮೆ ಸಮಯದಲ್ಲಿ ಲಸಿಕೆ ಬಂದಿದೆ. ಇಡೀ ವಿಶ್ವವೇ ಕಾಯುತ್ತಿದ್ದ ವ್ಯಾಕ್ಸಿನ್ ಇದೀಗ ನಮ್ಮ ಕೈಸೇರಿದೆ. ಹಗಲು ರಾತ್ರಿ ಶ್ರಮಿಸಿ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಮನುಷ್ಯ ಪರಿಶ್ರಮ ಹಾಕಿದರೆ ಕಲ್ಲು ಕೂಡ ನೀರಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.
ಅತಿ ಕಡಿಮೆ ಅವಧಿಯಲ್ಲಿ 2 ಸ್ವದೇಶಿ ಕೊರೋನಾ ವ್ಯಾಕ್ಸಿನ್ ಅಭಿವೃದ್ಧಿಯಾಗಿದೆ. ಮೊದಲ ಹಂತದಲ್ಲಿಯೇ ನಾವು 3 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇಂದಿನಿಂದ ಎಲ್ಲಾ ರಾಜ್ಯಗಳಲ್ಲೂ ಲಸಿಕೆ ವಿತರಣೆ ಆರಂಭವಾಗಲಿದೆ. ಇಷ್ಟು ದೊಡ್ಡ ಮಟ್ಟದ ಲಸಿಕೆ ಅಭಿಯಾನ ಇತಿಹಾಸದಲ್ಲಿಯೇ ಎಂದೂ ಆಗಿರಲಿಲ್ಲ ಎಂದರು.
ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್ಗಳಿಗೆ ಕೋವಿಡ್ ಡಿಜಿಟಲ್ ಪ್ಲಾಟ್ಫಾರಂ ಮೂಲಕ ಉಚಿತವಾಗಿ ಲಸಿಕೆ ನೀಡಲಾಗುವುದು. ಇವರು ಲಸಿಕೆ ಪಡೆಯಲು ಮೊದಲ ಹಕ್ಕುದಾರರು. ಎರಡು ಡೋಸ್ ಲಸಿಕೆ ಪಡೆಯುವ ಅಗತ್ಯವಿದೆ ಮೊದಲ ಡೋಸ್ ಪಡೆದು 2ನೇ ಡೋಸ್ ಪಡೆಯದೇ ಇರಬಾರದು ಎಂದರು.
ಕೊರೋನಾ ಲಸಿಕೆ ಸಿಕ್ಕಿದ ಮಾತ್ರಕ್ಕೆ ಮಾಸ್ಕ್ ಇಲ್ಲದೆ ಓಡಾಡುವುದು ಮತ್ತು ಅಂತರ ಕಾಯ್ದುಕೊಳ್ಳದೆ ಇರುವುದು ಸರಿಯಲ್ಲ, ಲಸಿಕೆ ಸಿಕ್ಕರೂ ಸಹ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.