Thursday, August 11, 2022

Latest Posts

ಕೊರೋನಾ ಲಸಿಕೆ ಹಂಚಿಕೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಆರೋಪ ಸುಳ್ಳು: ಸಚಿವ ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ, ಮೈಸೂರು:

ಕೊರೋನಾ ವ್ಯಾಕ್ಸಿನ್ ಹಂಚಿಕೆಯಲ್ಲಿ ಬಿಜೆಪಿ ಯಾವುದೇ ರಾಜಕೀಯ ಮಾಡುತ್ತಿಲ್ಲ, ಈ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕೊರೋನಾ ಲಸಿಕೆ ಹಂಚಿಕೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಎಐಸಿಸಿ ನಾಯಕ ರಾಹುಲ್‌ಗಾಂಧಿ ಆರೋಪಗಳನ್ನು ಮಾಡುತ್ತಾರೆ. ಅವರ ಸ್ಥಿತಿ ಈಗ ಹೇಗಿದೆ ಅಂತ ಜನತೆಗೆ ಗೊತ್ತಿದೆ. ಕಾಂಗ್ರೆಸ್ ರಚನಾತ್ಮಕ ಕೆಲಸಗಳಿಗೆ ಕೈಜೋಡಿಸಬೇಕು. ವಿರೋಧ ಪಕ್ಷಗಳು, ಕೇವಲ ವಿರೋಧ ಮಾಡಬಾರದು ಎಂದು ತಿಳಿಸಿದರು.

ರಚನಾತ್ಮಕ ಕೆಲಸ ಕಾರ್ಯಗಳಿಹೆ ಸಲಹೆ ಸೂಚನೆ ಕೊಡಬೇಕು. ರಾಹುಲ್‌ಗಾಂಧಿ ಇಷ್ಟೆಲ್ಲಾ ಆರೋಪ ಮಾಡ್ತಾರಲ್ಲ ಅವರ ಸ್ಥಿತಿ ಹೇಗಿದೆ ಅಂತ ಜನತೆಗೆ ಗೊತ್ತಿದೆ. ಇಡೀ ಜಗತ್ತಿನಲ್ಲೇ ಪ್ರಧಾನಿ ಮೋದಿ ನಂಬರ್ ಒನ್ ಜನಪ್ರಿಯತೆಯಲ್ಲಿದ್ದಾರೆ ಎಂದು ಹೇಳಿದರು.

ಶಾಸಕರ ಕ್ಷೇತ್ರಗಳಿಗೆ ಅನುಧಾನ ಹಂಚಿಕೆಯಲ್ಲಿ ತಾರತಮ್ಯ ಕುರಿತು ಮಾತನಾಡಿ, ಈ ಸಂಬoಧ ಈಗಾಗಲೇ ಚರ್ಚೆ ಆಗಿದೆ. ಮುಖ್ಯಮಂತ್ರಿಗಳು ಎಲ್ಲವನ್ನೂ ಗಮನಿಸಿದ್ದಾರೆ. ಆದಷ್ಟು ಬೇಗ ತಾರತಮ್ಯ ನಿವಾರಣೆ ಆಗಲಿದೆ. ಗೂಳಿಹಟ್ಟಿ ಶೇಖರ್ ಸೇರಿದಂತೆ ಕೆಲ ಶಾಸಕರ ಹೇಳಿಕೆಗಳಿಗೆ ಪ್ರತ್ಯೇಕವಾಗಿ ಉತ್ತರಿಸುವ ಅಗತ್ಯವಿಲ್ಲ. ಶೀಘ್ರದಲ್ಲೇ ಸಿಎಂ ಸಮಸ್ಯೆ ನಿವಾರಣೆ ಮಾಡಲಿದ್ದಾರೆ ಎಂದರು.
ಕೋವಿಡ್ ಲಾಕ್ ಡೌನ್ ನಂತರ ಅತಿ ಹೆಚ್ಚು ಉದ್ಯೋಗ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಲಾಕ್ ಡೌನ್ ನಂತರ ನಿರೀಕ್ಷೆ ಮೀರಿ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ತಿಳಿಸಿದರು.

ದೇಶದಲ್ಲಿ ಮೂರುವರೆ ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಂದಾಗಿದ್ದಾರೆ. ರಾಜ್ಯದಲ್ಲಿ 1.40 ಕೋಟಿ ಬಂಡವಾಳ ಹೂಡಲು ಕೈಗಾರಿಕೆಗಳು ಮುಂದಾಗಿವೆ. ಕೈಗಾರಿಕೆಯ ಶೇ. 41 ರಷ್ಟು ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಕೋವಿಡ್ ವೇಳೆಯಲ್ಲಿ ಅವರ ಗ್ರಾಮಗಳಿಗೆ ತೆರಳಿದ ನೌಕರರು ಪುನಃ ಹಿಂದಿರುಗಿ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ಜನ ಉದ್ಯೋಗಿಗಳು ರಾಜ್ಯಕ್ಕೆ ಆಗಮಿಸಿದ್ದು, ಕೌಶಲ್ಯಭಿವೃದ್ಧಿಗೆ ಹೆಚ್ಚು ಗಮನವಹಿಸಲಾಗುತ್ತಿದೆ.

ಉದ್ಯೋಗ ಸೃಷ್ಟಿಸಲು ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಮುಖಾಂತರ 350 ರಿಂದ 450 ಎಕರೆ ಪ್ರದೇಶದಲ್ಲಿ ವಿನೂತನ ಗೊಂಬೆಗಳ ತಯಾರಿಕೆಗೆ ಮುಂದಾಗಿದ್ದೇವೆ. ಇದರಿಂದ 20 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತೇವೆ. ದೇಶದಲ್ಲಿ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರು ಆಗಮಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಹೆಚ್ಚಿನ ಉದ್ಯೋಗಗಳು ರಾಜ್ಯದ ನಿರುದ್ಯೋಗಿಗಳಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಮರಾಜ ನಗರ ಹಿಂದುಳಿದಿರುವ ಗಡಿ ಜಿಲ್ಲೆ. ಈ ಗಡಿಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುತ್ತೇವೆ. ಇಲ್ಲಿಯೂ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆ ಇಂದು ಭೇಟಿ ನೀಡುತ್ತಿದ್ದೇನೆ. ಚಾಮರಾಜನಗರದಲ್ಲಿ ಕೈಗಾರಿಕೆಗಳ ಆರಂಭಿಸಲು ನೆರೆ ರಾಜ್ಯ ಕೇರಳದ ಉದ್ಯಮಿಗಳು ಅಗಮಿಸುತ್ತಿದ್ದಾರೆ. ಗಡಿಜಿಲ್ಲೆಯ ಕೈಗಾರಿಕೋದ್ಯಮ ರಾಜ್ಯದ ಕೈಗಾರಿಕೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.

ಈ ವೇಳೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮಾಜಿ ಜಿಲ್ಲಾಧ್ಯಕ್ಷ ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss