ಮಡಿಕೇರಿ: ಕೊರೋನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಆದೇಶ ಕೊಡಗು ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಶುಭ ಕಾರ್ಯಗಳು ಮುಂದೂಡಲ್ಪಡುತ್ತಿವೆ. ಆದರೆ ಇಲ್ಲೊಂದು ಜೋಡಿ ಇದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೇವಲ ನಾಲ್ವರನ್ನು ಸಾಕ್ಷಿಯನ್ನಾಗಿಸಿಕೊಂಡು ಸಪ್ತಪದಿ ತುಳಿದಿದೆ.
ನೆಲ್ಯಹುದಿಕೇರಿಯ ಮಹಾತ್ಮಗಾಂಧಿ ಕಾಲೋನಿಯ ರಾಮು ಹಾಗೂ ರಂಗೂ ದಂಪತಿಯ ಸೋದರಳಿಯ ಪ್ರಶಾಂತ್ ಮತ್ತು ಕರಡಿಗೋಡು ಗ್ರಾಮದ ನಿವಾಸಿ ಕುಮಾರ್ ಹಾಗೂ ಜಯ ದಂಪತಿಯ ಪುತ್ರಿ ತುಳಸಿ ಏ.5 ರಂದು ನವಜೀವನಕ್ಕೆ ಕಾಲಿಟ್ಟರು.
ಈ ಶುಭ ಮುಹೂರ್ತವನ್ನು ಕೆಲವು ತಿಂಗಳುಗಳ ಹಿಂದೆಯೇ ನಿಗದಿಪಡಿಸಿ ನೂರಾರು ಮಂದಿಗೆ ಆಹ್ವಾನ ಪತ್ರಿಕೆಯನ್ನು ಹಂಚಲಗಿತ್ತು. ನಿಗದಿಯಂತೆ ಎಲ್ಲವೂ ನಡೆದಿದ್ದರೆ ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ಪ್ರಶಾಂತ್ ಹಾಗೂ ತುಳಸಿಯ ವಿವಾಹ ಮಹೋತ್ಸವ ನೆರವೇರಬೇಕಾಗಿತ್ತು. ಆದರೆ ಕೊರೋನಾ ಸೋಂಕಿನಿಂದ ಜಿಲ್ಲೆ ಲಾಕ್ ಡೌನ್ಗೆ ಸಿಲುಕಿದ್ದರಿಂದ ವಿವಾಹವನ್ನು ಮುಂದೂಡುವ ಆಲೋಚನೆ ಮಾಡಲಾಯಿತಾದರೂ, ಏ.5 ರ ಶುಭ ಗಳಿಗೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವಂತಿಲ್ಲ ಎನ್ನುವ ಕಾರಣಕ್ಕೆ ಅಂದೇ ವಧುವಿನ ಮನೆಯಲ್ಲೇ ಸರಳ ರೀತಿಯಲ್ಲಿ ವಿವಾಹ ನಡೆಸಲು ನಿಶ್ಚಯಿಸಲಾಯಿತು.
ಅದೇ ಪ್ರಕಾರವಾಗಿ ಪ್ರಶಾಂತ್ ನ ಸೋದರ ಮಾವ ರಾಮು ಹಾಗೂ ರಂಗೂ ಮತ್ತು ತುಳಸಿಯ ತಂದೆ ಕುಮಾರ್ ಹಾಗೂ ತಾಯಿ ಜಯ ಈ ನಾಲ್ವರ ಸಮ್ಮುಖದಲ್ಲಿ ವಿವಾಹ ನಡೆಯಿತು. ಬೆರಳೆಣಿಕೆಯಷ್ಟು ಮಂದಿಯ ಆಶೀರ್ವಾದದೊಂದಿಗೆ ಪ್ರಶಾಂತ್ ಹಾಗೂ ತುಳಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.