Wednesday, August 10, 2022

Latest Posts

ಕೊರೋನಾ ವಾರಿಯರ್ಸ್ ‘ಆಶಾರನ್ನು’ ಗೌರವಿಸಿ ತಮ್ಮ ಷಷ್ಟ್ಯಬ್ದ ಆಚರಿಸಿಕೊಂಡ ಉಡುಪಿ ಹಿರಿಯ ದಸ್ತಾವೇಜು ಬರೆಹಗಾರ ರತ್ನಕುಮಾರ್

ಉಡುಪಿ: ಷಷ್ಟ್ಯಬ್ದ ಸಮಾರಂಭದಲ್ಲಿ ಭಾರೀ ಖರ್ಚು ಮಾಡುವುದು ಇದೆ, ಶ್ರಾವಣ ಶುಕ್ರವಾರ ಮಾತೆಯರನ್ನು ಗೌರವಿಸುವ ಕ್ರಮವೂ ಇದೆ. ಇಲ್ಲೊಬ್ಬರು ಈ ಸಂದರ್ಭವನ್ನು ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಮುಂಚೂಣಿ ಸ್ಥಾನದಲ್ಲಿರುವ ಆಶಾ ಕಾರ್ಯಕರ್ತೆಯರನ್ನು ಗೌರವಿಸಲು ಬಳಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ 60ವರ್ಷ ಭರ್ತಿಯಾದ ಉಡುಪಿಯ ಹಿರಿಯ ದಸ್ತಾವೇಜು ಬರೆಹಗಾರ ರತ್ನಕುಮಾರ್ ಉಡುಪಿ ಜಿಲ್ಲೆಯ ಎಲ್ಲ 1,026 ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ಸಾಂಕೇತಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಶಾಸಕ ಕೆ. ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಮಾತನಾಡಿ, ಕೊರೋನಾ ವಾರಿಯರ್‌ಗಳನ್ನು ಬಾಯಿ ಮಾತಿನಲ್ಲಿ ಹೊಗಳುವುದಕ್ಕಿಂತ ಕಾರ್ಯರೂಪದಲ್ಲಿ ಪ್ರಶಂಸಿಸುವುದು ಮುಖ್ಯ. ಇಂತಹ ಆದರ್ಶಗಳನ್ನು ಕೇವಲ ಕೆಲವೇ ದಿನಗಳಿಗೆ ಮೀಸಲಿಡುವ ಬದಲು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವುದು ಹಾಗೂ ನಾವು ಏನನ್ನು ಹೇಳುತ್ತೇವೋ ಅವುಗಳನ್ನು ಕಾರ್ಯರೂಪದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರಶಾಂತ ಭಟ್, ವೈದ್ಯಾಧಿಕಾರಿ ಡಾ. ಪ್ರೇಮಾನಂದ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಅಧಿಕಾರಿ ಹರಿಕೃಷ್ಣ ಶಿವತ್ತಾಯ ಕಾರ್ಯಕ್ರಮ ನಿರ್ವಹಿಸಿದರು. ರತ್ನಕುಮಾರ್ ಪತ್ನಿ ಸುಜಾತಾ, ಅವನಿ, ಶಶಾಂಕ ಶಿವತ್ತಾಯ ಮನೆಯ ಸದಸ್ಯರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss