ಮಡಿಕೇರಿ: ಕೊರೋನಾ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಜ್ಜಾಗಿದೆ.
ಸಂಸ್ಥೆಯಲ್ಲಿ ಈಗಾಗಲೇ ಕೊರೋನಾ ಪರೀಕ್ಷಾ ಪ್ರಯೋಗಾಲಯಕ್ಕೆ ಚಾಲನೆ ದೊರಕಿದ್ದು, ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದರೊಂದಿಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಇದರೊಂದಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 250 ಹಾಸಿಗೆಗಳನ್ನು ಕೋವಿಡ್-19ರ ರೋಗಿಗಳಿಗೆ ಮೀಸಲಿಡಲಾಗಿದ್ದು, ಈ ಪೈಕಿ 150ರಿಂದ 160 ಹಾಸಿಗೆಗಳಿಗೆ ಏಕ ಕಾಲದಲ್ಲಿ ಹೆಚ್ಚಿನ ಹರಿವು ಇರುವ ಆಮ್ಲಜನಕವನ್ನು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಒಟ್ಟು ರೂ.44.95 ಲಕ್ಷ ಮೊತ್ತದ ಕೇಂದ್ರೀಕೃತ ಆಕ್ಸಿಜನ್ ಪೈಪ್ ಲೈನ್ ಯೋಜನೆಗಾಗಿ ವಿಪತ್ತು ನಿಧಿಯಿಂದ ರೂ.40 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಮಡಿಕೇರಿಯ ತಾಜ್ ವಿವಾಂತ ಸಂಸ್ಥೆಯು 4.95 ಲಕ್ಷ ರೂ.ಗಳ ನೆರವನ್ನು ನೀಡಿದೆ. ಇದರ ಹೊರತಾಗಿಯೂ ಕೋವಿಡ್ ಆಸ್ಪತ್ರೆಯಲ್ಲಿ 11 ವೆಂಟಿಲೇಟರ್ಗಳ ವ್ಯವಸ್ಥೆಯೂ ಇದ್ದು, ಜಿಲ್ಲೆಯಲ್ಲಿ ಹರಡಬಹುದಾದ ಕೊರೋನಾ ಸೋಂಕನ್ನು ನಿಯಂತ್ರಿಸಲು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಎಲ್ಲಾ ರೀತಿಯಲ್ಲೂ ಸಿದ್ಧವಾಗುತ್ತಿದೆ.