Monday, July 4, 2022

Latest Posts

ಕೊರೋನಾ ವೈರಸ್ ಅಟ್ಯಾಕ್-ಚೀನಾ, ಇಟೆಲಿ, ಅಮೆರಿಕ ನಾಲ್ಕನೇ ಹಂತಕ್ಕೆ ತಲುಪಿದೆ; ಭಾರತ 2ನೇ ಸ್ಟೇಜಲ್ಲಿದೆಯಷ್ಟೆ

ಉಡುಪಿ: ಮೂರು ತಿಂಗಳ ಮೊದಲು ಹೆಸರೇ ಕೇಳದ ವೈರಸೊಂದು ಇಂದು ಇಡೀ ವಿಶ್ವವನ್ನೇ ಅಪಾಯಕ್ಕೆ ತಳ್ಳಿದೆ. ನೋವೆಲ್ ಕೊರೋನಾ ವೈರಸ್ ಸೋಂಕು (ಕೋವಿಡ್-19) ಚೀನಾ, ಇಟಲಿ, ಅಮೆರಿಕಾದಲ್ಲಿ ತೀವ್ರ ತೊಂದರೆ ಮಾಡಿದೆ. ಈ ದೇಶಗಳಲ್ಲಿ ಕೋವಿಡ್ -19 ನಾಲ್ಕನೇ ಹಂತ ತಲುಪಿದರೆ, ಭಾರತದಲ್ಲಿ ಎರಡನೇ ಹಂತದಲ್ಲಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಕೊರೋನಾ ವೈರಸ್ ಸೋಂಕು 4 ಹಂತದಲ್ಲಿ ಹರಡುತ್ತದೆ. ಕೊರೋನಾ ಪೀಡಿತ ದೇಶಗಳಿಂದ ಭಾರತಕ್ಕೆ ಆಗಮಿಸಿದವರಲ್ಲಿ ಸೋಂಕು ಪತ್ತೆಯಾದರೆ ಅದು ಮೊದಲ ಹಂತ. ಆ ರೀತಿ ಬಂದವರಿಂದ ಸ್ಥಳೀಯರಿಗೆ ಸೋಂಕು ತಗುಲಿದರೆ 2ನೇ ಹಂತ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಈಗಾಗಲೇ ಇದು ಕಂಡುಬಂದಿದೆ. ಮೂರನೇ ಹಂತದಲ್ಲಿ ಸೋಂಕಿತ ವ್ಯಕ್ತಿಗಳಿಂದ ಇಡೀ ಸಮುದಾಯಕ್ಕೆ ಸೋಂಕು ತಗುಲಿ, ಹೆಚ್ಚು ಪ್ರದೇಶಗಳಿಗೆ ಕೊರೋನಾ ಸೋಂಕು ಹಬ್ಬುತ್ತದೆ. ಕೊರೋನಾ ಸೋಂಕು ಸಾಂಕ್ರಾಮಿಕ ಪಿಡುಗಿನ ಸ್ವರೂಪ ಪಡೆದರೆ ಅದೇ 4ನೇ ಹಂತ. ಪ್ರಸಕ್ತ 2ನೇ ಹಂತದಲ್ಲಿರುವ ಭಾರತವು 3 ಹಾಗೂ 4ನೇ ಹಂತವನ್ನು ಆಹ್ವಾನಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವುದು.

ಇಂದಿನ ತುರ್ತು ಅಗತ್ಯ. ಭಾರತ ಎಚ್ಚರ ತಪ್ಪಿದರೆ ಪರಿಸ್ಥಿತಿ: ಕೈ ಮೀರಿ ಹೋಗಿಬಿಡುತ್ತದೆ ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಸಾಂಕ್ರಾಮಿಕ ಪಿಡುಗಾಗಿ ಪರಿವರ್ತನೆಯಾದರೆ…
ಸದ್ಯ ಅಭಿವೃದ್ಧಿ ಹೊಂದಿದ ದೇಶಗಳಾದ ಇಟಲಿ, ಅಮೆರಿಕದಲ್ಲಿಯೇ ಸಾಂಕ್ರಾಮಿಕ ಪಿಡುಗಿನ ಸ್ವರೂಪ ಪಡೆದ ಕೊರೋನಾ ವೈರಸ್ ಅನ್ನು ನಿಯಂತ್ರಿಸಲು ಆವಶ್ಯಕ ವ್ಯವಸ್ಥೆಗಳಿಲ್ಲ. ಅಲ್ಲಿಯೇ ಮಾಸ್ಕ್‌ಗಳು, ಸಾನಿಸೈಟಸರ್‌ಗಳು, ವೈಯಕ್ತಿಕ ರಕ್ಷಣಾ ಸಾಧನ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್) ಗಳು ಕೊರತೆಯಾಗಿವೆ. ಮಾತ್ರವಲ್ಲ ಅಲ್ಲಿನ ಆಸ್ಪತ್ರೆಗಳಲ್ಲಿಯೂ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವಿಲ್ಲದಾಗಿದೆ. ಹೀಗಿರುವಾಗ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ, ಅದರಲ್ಲಿಯೂ ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದಿದೆ ಎನ್ನಲಾಗುವ ಕರಾವಳಿಯಲ್ಲಿರುವ ಆರೋಗ್ಯ ಸಂಸ್ಥೆಗಳಿಗೂ ಕೋವಿಡ್-19ನ್ನು ನಿಯಂತ್ರಿಸುವ ಸಾಮರ್ಥ್ಯವಿಲ್ಲ. ಅದಕ್ಕೆ ಬೇಕಾದ ಸಾಧನ, ಸಲಕರಣೆಗಳು ಹಾಗೂ ವ್ಯವಸ್ಥೆಗಳಿಲ್ಲ ಎನ್ನುತ್ತಾರೆ ಮಣಿಪಾಲ ಮಾಹೆಯ ಉಡುಪಿ ಟಿಎಂಎ ಪೈ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಶಶಿಕಿರಣ್ ಉಮಾಕಾಂತ್.

ಮುಂಜಾಗ್ರತಾ ಕ್ರಮವೇ ಸದ್ಯಕ್ಕಿರುವ ಮದ್ದು: ಕೋವಿಡ್-19 ರೋಗಕ್ಕೆ ಯಾವುದೇ ಔಷಧಿ ಸದ್ಯಕ್ಕಿಲ್ಲ. ರೋಗ ಲಕ್ಷಣಗಳನ್ನು ನೋಡಿಕೊಂಡು ಅದಕ್ಕೆ ಔಷಧಿ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಲಸಿಕೆಯೂ ಇಲ್ಲದಿರುವುದರಿಂದ ಕೊರೋನಾ ಸಾಂಕ್ರಾಮಿಕ ಪಿಡುಗಿನ ಸ್ವರೂಪ ಪಡೆಯುವುದನ್ನು ತಡೆಯುವುದಕ್ಕೆ ಮುಂಜಾಗ್ರತಾ ಕ್ರಮವೇ ಸದ್ಯಕ್ಕಿರುವ ಮದ್ದು. ಸಾರ್ವಜನಿಕರು ಈ ಸೋಂಕಿಗೆ ಹೆದರಬೇಕಿಲ್ಲ, ಆದರೆ ಮುನ್ನೆಚ್ಚರಿಕೆ ವಹಿಸಲೇಬೇಕು. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಜನಸಂದಣಿ ಸೇರುವ ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧ ಹೇರುವ ಮೂಲಕ ಸಾಮಾಜಿಕ ಅಂತರ (ಸೋಶಿಯಲ್ ಡಿಸ್ಟೆನ್ಸ್)ವನ್ನು ಕಾಯ್ದುಕೊಳ್ಳುವ ಸರಕಾರದ ನಿರ್ಧಾರ ಸುಮ್ಮನೆಯಲ್ಲ. ಅದನ್ನು ಜನರು ಅರ್ಥಮಾಡಿಕೊಂಡು ಕಟ್ಟುನಿಟ್ಟಾಗಿ ಪಾಲಿಸಬೇಕು. ಸರಕಾರ ಕೇವಲ ಮಾಲ್, ಶಾಲೆಗಳನ್ನು ಮಾತ್ರವಲ್ಲದೇ ಹೆಚ್ಚು ಜನರು ಸೇರುವ ಪ್ರತಿಯೊಂದಕ್ಕೂ ನಿರ್ಬಂಧ ಹೇರಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿಯ ಮಾಧ್ಯಮ ಸಲಹೆಗಾರ ಡಾ. ಪಿ.ವಿ. ಭಂಡಾರಿ ಅಭಿಪ್ರಾಯ ಪಡುತ್ತಾರೆ.

ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:
ನಾಗರಿಕರು ಅನಾವಶ್ಯಕವಾಗಿ ಪ್ರಯಾಣ ಮಾಡುವುದು ಬೇಡ
ಸಮಾಜದಲ್ಲಿ ಹೆಚ್ಚು ಜನರ ಜೊತೆಗೆ ಸಂಪರ್ಕವೂ ಬೇಡ
ಬೇರೆಯವರನ್ನು ಸ್ಪರ್ಶಿಸಿದರೆ, ಸಂಪರ್ಕಕ್ಕೆ ಬಂದರೆ ಕೈತೊಳೆದುಕೊಳ್ಳಬೇಕು
ವ್ಯಕ್ತಿಗಳಿಂದ 1-2 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು
ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಬೇಕು
ಜ್ವರ, ಶೀತ ಕಾಣಿಸಿಕೊಂಡರೆ ಮನೆಗಳಲ್ಲಿ ಇತರರಿಂದ ಪ್ರತ್ಯೇಕವಾಗಿರಬೇಕು
ಜ್ವರಕ್ಕೆ ಪ್ಯಾರಾಸಿಟಮೋಲ್ (500-650 ಎಂಜಿ) ಔಷಧಿಗಳನ್ನು ಮಾತ್ರ ಸೇವಿಸಬೇಕು
ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅಗತ್ಯವಾಗಿ ವೈದ್ಯರನ್ನು ಕಾಣಬೇಕು
ಹೆಚ್ಚು ನೀರು ಕುಡಿಯಬೇಕು (ಒಬ್ಬ ವ್ಯಕ್ತಿ ದಿನಕ್ಕೆ 1-3 ಲೀಟರ್)

ಅತೀ ಹೆಚ್ಚು ವೇಗವಾಗಿ ಹರಡುವ ವೈರಾಣು: ಜಗತ್ತಿನಲ್ಲಿ ಇತರ ಜೀವಿಗಳಲ್ಲಿ, ಮಾನವ ದೇಹದಲ್ಲಿಯೂ ಅಸಂಖ್ಯ ವೈರಾಣುಗಳಿವೆ. ಭಾರತದಲ್ಲಿ 12ವರ್ಷಗಳ ಹಿಂದೆ ಕಾಣಿಸಿಕೊಂಡ ಎಚ್1ಎನ್1 (ಹಂದಿಜ್ವರ) ಮಾರಣಾಂತಿಕ ವೈರಸ್. ಆದರೆ ಅದು ಸಹಿತ ಬೇರೆ ವೈರಸ್‌ಗಳಿಗೆ ಹೋಲಿಸಿದರೆ ನೋವೆಲ್ ಕೊರೋನಾ ವೈರಸ್ ಅತೀ ಹೆಚ್ಚು ವೇಗವಾಗಿ ಹರಡುತ್ತದೆ. ಅಲ್ಲದೇ ಇದು ಇತ್ತೀಚೆಗೆ ಮೂರು ತಿಂಗಳ ಹಿಂದೆಯಷ್ಟೇ ಪತ್ತೆಯಾಗಿರುವುದರಿಂದ ಈ ವೈರಾಣುವಿಗೆ ಯಾವುದೇ ಲಸಿಕೆ ಹಾಗೂ ರೋಗಕ್ಕೆ ಯಾವುದೇ ಔಷಧಿ ಸದ್ಯಕ್ಕೆ ಇಲ್ಲವಾಗಿದೆ. ಆದ್ದರಿಂದ ಇದನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದು ತಜ್ಞ ವೈದ್ಯರ ವಿಶ್ಲೇಷಣೆಯಾಗಿದೆ.

ಸುರಕ್ಷಿತವಾಗಿ ಕೈ ತೊಳೆದುಕೊಳ್ಳುವ ವಿಧಾನ: ಹೆಚ್ಚಿನ ವೈರಾಣುಗಳು ಕೈಗಳ ಮೂಲಕವೇ ದೇಹವನ್ನು ಪ್ರವೇಶಿಸುತ್ತವೆ. ಆದ್ದರಿಂದ ಕೋವಿಡ್-19 ದೂರವಿರಿಸಲು ಎಲ್ಲರೂ ಹೇಳುವ ಪ್ರಮುಖ ಮುನ್ನೆಚ್ಚರಿಕಾ ಕ್ರಮ ವೈಯಕ್ತಿಕ ಸ್ವಚ್ಛತೆ, ಅಂದರೆ ಕೈಗಳನ್ನು ಶುಚಿಯಾಗಿರಿಸಿಕೊಳ್ಳಬೇಕು. ಸಾಬೂನಿನಿಂದ ಕೈ ತೊಳೆದುಕೊಳ್ಳುವಾಗ ಹರಿಯುವ ನೀರಿನಲ್ಲಿ ಒಂದು ನಿಮಿಷ ಕಾಲ ಕೈಗಳ ಪ್ರತಿಯೊಂದು ಭಾಗವನ್ನು 10 ಸೆಕೆಂಡ್‌ಗಳ ಕಾಲ ತಿಕ್ಕಿ ತೊಳೆಯಬೇಕು. ಇಲ್ಲದಿದ್ದರೆ ಅಲ್ಕೋಹಾಲ್‌ ಯುಕ್ತ ಸಾನಿಟೈಸರ್‌ಗಳಿಂದ ಕೈಗಳನ್ನು ತೊಳೆಯುವುದಾದರೆ 20 ಸೆಕೆಂಡ್‌ಗಳ ಕೈಗಳನ್ನು ತಿಕ್ಕಿ ತೊಳೆಯಬೇಕು. ಆಗ ಮಾತ್ರ ವೈರಾಣು ನಾಶವಾಗುತ್ತದೆ. ಸುಮ್ಮನೆ ನಳ್ಳಿ ನೀರಿನಲ್ಲಿ ಕೈ ತೊಳೆದರೆ ಅದರಿಂದ ವೈರಾಣುಗಳು ಸಾಯುವುದಿಲ್ಲ.

ಕೋವಿಡ್-19 ಯಾರಿಗೆ ಹೆಚ್ಚು ಅಪಾಯಕಾರಿ?
ಅತೀ ಹೆಚ್ಚು ಕೊರೋನಾ ವೈರಸ್‌ಗೆ ತುತ್ತಾಗಿರುವ ದೇಶಗಳು ಹಾಗೂ ಭಾರತದಲ್ಲಿ ಸೋಂಕಿಗೆ ಬಲಿಯಾದವರು ಹೆಚ್ಚಾಗಿ ವಯೋವೃದ್ಧರು. ಅಲ್ಲದೇ ಅವರೊಂದಿಗೆ ಮಧುಮೇಹ, ಹೃದ್ರೋಗ, ಶ್ವಾಸಕೋಶದ ಸಮಸ್ಯೆ ಇರುವವರಿಗೆ ಕೋವಿಡ್-19 ಹೆಚ್ಚು ಅಪಾಯಕಾರಿಯಾಗಿದೆ. ಶೇ.80ರಷ್ಟು ಜನರಿಗೆ ರೋಗ ಲಕ್ಷಣಗಳು ಸೌಮ್ಯವಾಗಿ ಕಂಡು ಬಂದು ಸಹಜವಾಗಿಯೇ ಸೋಂಕು ಗುಣವಾಗುತ್ತದೆ. ಇನ್ನು ಶೇ.15 ರೋಗಿಗಳಿಗೆ ಗಂಭೀರವಾದರೆ, ಶೇ.5 ಮಂದಿಯಲ್ಲಿ ಮಾರಣಾಂತಿಕವಾಗಿರುತ್ತದೆ. ಅವರಲ್ಲಿ ಶೇ. 2-3ರಷ್ಟು ರೋಗಿಗಳು ಸಾವನ್ನಪ್ಪುತ್ತಾರೆ. ವ್ಯಕ್ತಿ ಆರೋಗ್ಯವಂತರಾಗಿದ್ದು, ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಅವರಿಗೆ ಯಾವುದೇ ಅಪಾಯ ಸಂಭವಿಸುವುದಿಲ್ಲ. ಆದರೆ ಅವರು ಹೊರಗೆ ಹೋಗುವುದರಿಂದ ಸುತ್ತಮುತ್ತಲ ಜನರಿಗೆ ಸೋಂಕು ಹರಡುತ್ತದೆ ಎಂದು ಡಾ. ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.

ವೈರಸ್ ಕುರಿತು ವೈರಲ್ ಮಾಹಿತಿ ನಂಬದಿರಿ: ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು. ವೈದ್ಯರು ನೀಡುವ ಸಲಹೆ ಹಾಗೂ ಚಿಕಿತ್ಸೆಗಳನ್ನು ತಪ್ಪದೇ ಪಾಲಿಸಬೇಕು. ವೈಯಕ್ತಿಕ ಶುಚಿತ್ವವನ್ನು ಕಾಪಾಡಬೇಕು. ಪ್ರಾಥಮಿಕ ಲಕ್ಷಣವಿರುವ ಜನರಿಂದ ಕನಿಷ್ಠ 1-2 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಕೊರೋನಾ ಬಗ್ಗೆ ವೈರಲ್ ಆದ ಸೋಶಿಯಲ್ ಮೀಡಿಯಾ ಸುದ್ದಿಯನ್ನು ನಂಬದೇ ಕೊರೋನಾ ವೈರಸ್ ಬಗ್ಗೆ ತಿಳಿದುಕೊಳ್ಳುವುದು ಒಳಿತು.
ಡಾ. ಉಮೇಶ್ ಪ್ರಭು, ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss