ಹೊಸದಿಗಂತ ಆನ್ಲೈನ್ ಡೆಸ್ಕ್:
ಮಹತ್ವದ ಬೆಳವಣಿಗೆಯೊಂದರಲ್ಲಿ ಜಗತ್ತನ್ನೇ ಕಾಡುತ್ತಿರುವ ಕೊರೋನಾ ವೈರಸ್ ಬಗೆಗಿನ ಸ್ಪೋಟಕ ಮಾಹಿತಿಯನ್ನು ಮುಂಬೈನ ಐಐಟಿಯ ವಿಜ್ಞಾನಿಗಳು ಬಹಿರಂಗಗೊಳಿಸಿದ್ದಾರೆ.
ಕಾಗದ, ಬಟ್ಟೆಯಂತಹ ಮೇಲ್ಮೈ ಮೇಲೆ ಕೊರೋನಾ ವೈರಸ್ ಆಯುಷ್ಯ ಬಹಳ ಕಡಿಮೆಯಾಗಿದ್ದು, ಇದರಲ್ಲಿ ವೈರಸ್ ಜೀವಿತಾವಧಿ ಕೆಲವು ಗಂಟೆಗಳು ಮಾತ್ರವಾಗಿದೆ. ಆದರೆ ಗಾಜು, ಸ್ಟೈನ್ಲೆಸ್ ಸ್ಟೀಲ್ ಮತ್ತು ಪ್ಲಾಸ್ಟಿಕ್ನಲ್ಲಿ ಈ ವೈರಸ್ ಕ್ರಮವಾಗಿ ನಾಲ್ಕು ಗಂಟೆ, ಏಳು ಗಂಟೆ ಮತ್ತು ಏಳು ದಿನಗಳವರೆಗೆ ಬದುಕುತ್ತದೆ. ಕಾಗದದ ಮೇಲೆ ಇರುವ ವೈರಸ್ ಮೂರು ಗಂಟೆಗಳಿಗಿಂತಲೂ ಕಡಿಮೆ ಬದುಕುತ್ತದೆ ಎಂದು ವಿಜ್ಞಾನಿಗಳು ಖಚಿತಪಡಿಸಿಕೊಂಡಿದ್ದಾರೆ.
ಕೆಮ್ಮಿದಾಗ ಬಿದ್ದ ಹನಿಗಳು ಬೇಗನೆ ಒಣಗುತ್ತವೆ, ಆದರೆ ಅದರಲ್ಲಿನ ತೆಳುವಾದ ನೀರಿನ ಪದರ ಹಾಗೆ ಉಳಿದುಕೊಳ್ಳುತ್ತದೆ. ಇದರಲ್ಲಿ ವೈರಸ್ ಹಾಗೇ ಉಳಿದುಕೊಳ್ಳುತ್ತದೆ. ಇದನ್ನು ಬರಿಕಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ. ಇದಕ್ಕಾಗಿ ನಾವು ಕಂಪ್ಯೂಟರ್ ಸಿಮ್ಯುಲೇಶನ್ ಅನ್ನು ಬಳಸಿ ಅಧ್ಯಯನ ನಡೆಸಿದ್ದೇವೆ ಎಂದು ತಂಡ ಹೇಳಿದೆ. ಕಾಗದ, ಬಟ್ಟೆಯಂತಹ ಪೋರಸ್ ಮೇಲ್ಮೈನಲ್ಲಿ ವೈರಸ್ ಗಳನ್ನು ಬೇಗನೆ ಒಣಗುವುದರಿಂದ ಅದು ಬೇಗನೆ ಹರಡುವುದಿಲ್ಲ. ಆದರೆ ಗಾಜು, ಸ್ಟೇನ್ ಲೆಸ್ ಸ್ಟೀಲ್ ಇತ್ಯಾದಿಗಳಲ್ಲಿ ತಡವಾಗಿ ಆವಿಯಾಗುವುದರಿಂದ ವೈರಸ್ ಬೇಗನೆ ಹರಡುತ್ತದೆ ಎಂದು ಅವರು ಹೇಳಿದ್ದಾರೆ.