ಮಂಗಳೂರು: ಕೊರೋನಾ ವೈರಸ್ ಭಯದಿಂದ ಇನ್ನೂ ಹೊರ ಬಂದಿಲ್ಲ, ಆಗಲೇ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ಹಿಂದೊಮ್ಮೆ ಕಾಡಿದ್ದ ಹಕ್ಕಿ ಜ್ವರ ಎಂಬ ಕಾಯಿಲೆಯ ಭೀತಿ ಮತ್ತೆ ಕಾಡುತ್ತಿದೆ.
ಕೇರಳದ ಕೋಳಿ ಫಾರ್ಮ್ನಲ್ಲಿ ದೃಢಪಟ್ಟಿದೆ ಹಕ್ಕಿ ಜ್ವರ ಕೇರಳದ ಪಶ್ಚಿಮ ಕೊಡಿಯಾಥುರ್ ನ ಕೋಳಿ ಫಾರ್ಮ್ ಒಂದರಲ್ಲಿ ಹಾಗೂ ಕೋಯಿಕ್ಕೋಡ್ ನ ವೆಂಗೇರಿಯಲ್ಲಿನ ಖಾಸಗಿ ನರ್ಸರಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ವಾಣಿಜ್ಯ ವ್ಯವಹಾರಗಳಲ್ಲಿ ನೇರ ಸಂಪರ್ಕ ಹೊಂದಿರುವ ದಕ್ಷಿಣ ಕನ್ನಡಕ್ಕೆ ಈ ಬೆಳವಣಿಗೆ ಸಹಜವಾಗಿಯೇ ಹೊಸ ಆತಂಕವಾಗಿ ಕಾಡುತ್ತಿದೆ.
ಹಕ್ಕಿಜ್ವರ ಹರಡದಂತೆ ದಕ್ಷಿಣ ಕನ್ನಡ ಈಗಲೇ ಅಲರ್ಟ್: ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆ ಈಗಾಗಲೇ ಅಲರ್ಟ್ ಆಗಿದ್ದು, ಎಲ್ಲೆಡೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ಆಸ್ಪತ್ರೆಗಳಿಗೂ ಎಚ್ಚರಿಕೆ ವಹಿಸಲು ಸೂಚನೆ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿಯೂ ಹಕ್ಕಿಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ.
2016ರ ನಂತರ ಮೊದಲ ಬಾರಿ ಕಾಣಿಸಿದೆ ಹಕ್ಕಿಜ್ವರ: 2016ರ ನಂತರ ಕೇರಳ ರಾಜ್ಯದಲ್ಲಿ ಏಕಾಏಕಿ ಕಾಣಿಸಿಕೊಂಡ ಮೊದಲ ಹಕ್ಕಿಜ್ವರ ಪ್ರಕರಣ ಇದಾಗಿದೆ. ಪ್ರತಿದಿನ ಇನ್ನೂರು ಕೋಳಿಗಳು ಸಾಯಲು ಪ್ರಾರಂಭಿಸಿದಾಗ ಹಕ್ಕಿಜ್ವರದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ವರದಿಗಳ ಪ್ರಕಾರ ಕೋಳಿಗಳಲ್ಲಿ ಹಕ್ಕಿ ಜ್ವರವಿರುವುದು ಭೋಪಾಲ್ ಪ್ರಯೋಗಾಲಯದಿಂದ ದೃಢಪಟ್ಟಿದೆ.
ಇಷ್ಟಕ್ಕೂ ಮನುಷ್ಯರಿಗೆ ಹೇಗೆಲ್ಲಾ ಹರಡುತ್ತದೆ ಈ ಹಕ್ಕಿಜ್ವರ ಅಂದರೆ…
ಹಕ್ಕಿಯ ತ್ಯಾಜ್ಯ ಮನುಷ್ಯನ ಸಂಪರ್ಕಕ್ಕೆ ಬಂದರೆ ಅದರಿಂದ ವೈರಾಣು ಮನುಷ್ಯನ ದೇಹಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಸೋಂಕು ಪೀಡಿತ ಹಕ್ಕಿಗಳ ಮೂಗಿನ ಸ್ರಾವ, ಬಾಯಿ ಅಥವಾ ಕಣ್ಣಿನಿಂದ ಸ್ರವಿಸುವ ದ್ರವದ ಮೂಲಕವೂ ಬರುವ ಸಾಧ್ಯತೆ ಇದೆ.ಕೋಳಿ ಫಾರಂನಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸುವುದು ಅಗತ್ಯ.
ಭಯ ಬೇಡ, ಈ ‘ಹಕ್ಕಿಜ್ವರ’ ಕಾಯಿಲೆ ಮನುಷ್ಯರಿಗೆ ಕಾಡುವುದು ಅಪರೂಪ ಆದರೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಹಕ್ಕಿಗಳ ತ್ಯಾಜ್ಯಗಳು ಸೋಕದಂತೆ ಎಚ್ಚರಿಕೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಜನತೆಯಲ್ಲಿ ಮನವಿ ಮಾಡಿದೆ.