Thursday, July 7, 2022

Latest Posts

ಕೊರೋನಾ ವೈರಸ್ ಸಮುದಾಯ ಹರಡುವಿಕೆ ಬೆದರಿಕೆಯನ್ನು ತಪ್ಪಿಸುವುದು ಪ್ರಧಾನ ಉದ್ದೇಶ: ಕೇರಳ ಮುಖ್ಯಮಂತ್ರಿ

ಕಾಸರಗೋಡು: ಕೋವಿಡ್ ಪ್ರತಿರೋಧದ ಹೊಸ ಹಂತವನ್ನು ಕೇರಳ ಪ್ರವೇಶಿಸುತ್ತಿದೆ. ಇದರೊಂದಿಗೆ ಸಮುದಾಯ ಹರಡುವಿಕೆಯ ಬೆದರಿಕೆಯನ್ನು ತಪ್ಪಿಸುವುದು ಸರಕಾರದ ಪ್ರಧಾನ ಉದ್ದೇಶ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಿಯಂತ್ರಣ ತಪ್ಪಿದರೆ ಸಮಸ್ಯೆ ಕೈಬಿಟ್ಟು ಹೋಗಬಹುದು ಮತ್ತು ಸಂಪರ್ಕದ ಮೂಲಕ ರೋಗ ಹರಡಿದರೆ ಅನಿರೀಕ್ಷಿತ ವಿಪತ್ತುಗಳನ್ನು ನಾವು ಎದುರಿಸಬೇಕಾಗಬಹುದು ಎಂದು ಮುಖ್ಯಮಂತ್ರಿ ಹೇಳಿದರು. ಅದಕ್ಕಾಗಿಯೇ ಜಾಗ್ರತೆ ಪಾಲಿಸಬೇಕೆಂದು ಪದೇ ಪದೇ ಹೇಳುತ್ತಿರುವುದು. ಸೋಂಕಿತ ಪ್ರದೇಶಗಳಿಂದ ಬರುವವರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವುದು ಹಾಗೂ ಸಮುದಾಯದ ಏಕಾಏಕಿ ಬೆದರಿಕೆಯನ್ನು ತಪ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ರಾಜ್ಯಕ್ಕೆ ಆಗಮಿಸುವವರ ಬಗ್ಗೆ ಎಲ್ಲ ಸಮಗ್ರ ಮಾಹಿತಿಯನ್ನು ಸಂಗ್ರಹಿಸಬೇಕು. ಇದರ ಭಾಗವಾಗಿ ಕೋವಿಡ್ ಜಾಗ್ರತ 19 ವೆಬ್ ಪೋರ್ಟಲ್‌ನಲ್ಲಿ ನೋಂದಣಿ ಮತ್ತು ಪಾಸ್ ಅನ್ನು ಕಡ್ಡಾಯಗೊಳಿಸಲಾಗಿದೆ. ನಮ್ಮ ಸಹೋದರರು ಇನ್ನೂ ಅನೇಕ ಸ್ಥಳಗಳಲ್ಲಿ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ಅವರು ನುಡಿದರು.
ಇತರ ರಾಜ್ಯಗಳಿಂದ ರಸ್ತೆ ಮೂಲಕ ಕೇರಳಕ್ಕೆ 33 ಸಾವಿರಕ್ಕೂ ಹೆಚ್ಚು ಜನರು ಊರಿಗೆ ತಲುಪಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿವರಿಸಿದರು.

ಈ ಪೈಕಿ 19,000 ಮಂದಿ ರೆಡ್‌ ಜೋನ್ ಜಿಲ್ಲೆಗಳಿಂದ ಬಂದವರು. ಒಟ್ಟು ಪಾಸ್ ಗೋಸ್ಕರ ಅರ್ಜಿ ಸಲ್ಲಿಸಿದ 1.33 ಲಕ್ಷ ಜನರಲ್ಲಿ 72,800 ಜನರು ರೆಡ್ ಜೋನ್ ಜಿಲ್ಲೆಯವರು. ಈ ವರೆಗೆ 89,950 ಪಾಸ್‌ಗಳನ್ನು ನೀಡಲಾಗಿದೆ. ಈ ಪೈಕಿ 45,157 ಮಂದಿ ರೆಡ್‌ ಜೋನ್ ಜಿಲ್ಲೆಯವರು. ಮೇ 7 ರಿಂದ ವಿದೇಶಗಳಿಂದ ಬಂದ ಏಳು ಜನರಲ್ಲಿ ಕೊರೋನಾ ರೋಗ ಪತ್ತೆಯಾಗಿರುವುದರಿಂದ, ಆ ವಿಮಾನಗಳಲ್ಲಿನ ಎಲ್ಲ ಪ್ರಯಾಣಿಕರನ್ನು ವಿಶೇಷ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಅವರ ಬಗ್ಗೆ ಹೆಚ್ಚಿನ ಕಾಳಜಿ ಆರೋಗ್ಯ ಇಲಾಖೆ ವಹಿಸುತ್ತಿದೆ ಎಂದರವರು.

ವಿಶೇಷ ರೈಲಿನಲ್ಲಿ ಆಗಮಿಸುವ ರೈಲು ಟಿಕೆಟ್ ತೆಗೆಯುವವರು ಕೋವಿಡ್ ಜಾಗ್ರತಾ ಪೋರ್ಟಲ್‌ನಿಂದ ಪಾಸ್ ಪಡೆಯಬೇಕು. ತಿರುವನಂತಪುರಕ್ಕೆ ಬರುವ ರೈಲು ಗಾಡಿಯನ್ನು ಕೋಝಿಕೋಡು ಮತ್ತು ಎರ್ನಾಕುಲಂನಲ್ಲಿ ಮಾತ್ರ ನಿಲ್ಲಿಸಲು ಅನುಮತಿ ನೀಡಲಾಗಿದೆ. ಕಾಸರಗೋಡು ತಲುಪಬೇಕಾದವರು ಹತ್ತಿರದ ನಿಲ್ದಾಣವಾದ ಮಂಗಳೂರಿನಲ್ಲಿ ಇಳಿದು ಕೇರಳಕ್ಕೆ ಬರಲು ಅನುಕೂಲವಾಗುತ್ತದೆ.

ತೊಂದರೆ ತಪ್ಪಿಸಲು ರಾಜಧಾನಿ ಎಕ್ಸ್‌ಪ್ರೆಸ್‌ ರೈಲನ್ನು ನಿಲ್ಲಿಸುವ ಎಲ್ಲ ನಿಲ್ದಾಣಗಳಲ್ಲಿ ಈ ರೈಲುಗಳನ್ನು ನಿಲ್ಲಿಸುವಂತೆ ಕೇರಳವು ಕೇಂದ್ರ ಮತ್ತು ರೈಲ್ವೆಗೆ ತಿಳಿಸಿದೆ. ಗಲ್ಫ್ ಪ್ರದೇಶದಲ್ಲಿ ಕೊರೋನಾ ಭೀತಿಯಿಂದ ಗರ್ಭಿಣಿಯರು, ಮಕ್ಕಳು ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರನ್ನು ಸಾಗಿಸಲು ವಿಶೇಷ ವಿಮಾನ ಏರ್ಪಡಿಸಬೇಕೆಂದು ವಿದೇಶಾಂಗ ಖಾತೆ ಸಚಿವ ಎಸ್.ಜಯಶಂಕರ್ ಅವರಿಗೆ ಮನವಿ ಮಾಡಲಾಗಿದೆ.

ಈಗ ಬರುವವರಲ್ಲಿ ಇಪ್ಪತ್ತು ಪ್ರತಿಶತ ಗರ್ಭಿಣಿಯರು. ಅನೇಕ ಗರ್ಭಿಣಿಯರು ಮರಳಲು ಸಾಧ್ಯವಾಗದೆ ಗಲ್ಫ್ ನಲ್ಲಿ ವಾಸಿಸುತ್ತಿದ್ದಾರೆ. ಅವರ ಬಗ್ಗೆ ವಿಶೇಷ ಗಮನ ನೀಡಬೇಕು. ಪ್ರಸ್ತುತ ಚಾರ್ಟ್ ಮಾಡಿದ ವಿಮಾನಗಳಲ್ಲಿ ಹೆಚ್ಚಿನ ಸೀಟುಗಳನ್ನು ಅವರಿಗಾಗಿ ಕಾಯ್ದಿರಿಸುವಂತೆ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss