Wednesday, August 17, 2022

Latest Posts

ಕೊರೋನಾ ಸಹಿತ ವಿವಿಧ ಕಾಯಿಲೆಗಳಿಗೆ ಮೊಬೈಲ್ ಆ್ಯಪ್ ಇ- ಸಂಜೀವನಿ ಮೂಲಕ ವೀಡಿಯೊ ಕಾಲ್‌ನಲ್ಲಿ ಚಿಕಿತ್ಸೆ ಲಭ್ಯ

ಮಂಗಳೂರು: ಕೊರೋನಾ ಸಹಿತ ವಿವಿಧ ಕಾಯಿಲೆಗಳಿಗೆ ಮೊಬೈಲ್ ಆ್ಯಪ್ ಇ- ಸಂಜೀವನಿ ಮೂಲಕ ವೈದ್ಯರನ್ನು ವೀಡಿಯೊ ಕಾಲ್‌ನಲ್ಲಿ ಸಂಪರ್ಕಿಸಿ ಉಚಿತ ಚಿಕಿತ್ಸೆ ಪಡೆಯುವ ಕೇಂದ್ರ ಸರಕಾರದ ಯೋಜನೆ ಆರಂಭಗೊಂಡಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಇ- ಸಂಜೀವನಿ ದ.ಕ. ಜಿಲ್ಲಾ ನೋಡೆಲ್ ಅಧಿಕಾರಿ ಡಾ. ರತ್ನಾಕರ ತಿಳಿಸಿದರು.
ಕೇಂದ್ರ ಸರಕಾರದ ನ್ಯಾಶನಲ್ ಹೆಲ್ತ್ ಮಿಷನ್ ಯೋಜನೆಯಡಿ ನ್ಯಾಶನಲ್ ಟೆಲಿ ಕನ್ಸಲ್ಟೇಶನ್ ಸರ್ವಿಸ್ ಆರಂಭಗೊಂಡಿದೆ. ರೋಗಿಗಳು ಮನೆಯಲ್ಲೇ ಕುಳಿತು ಇ- ಸಂಜೀವನಿ ಆ್ಯಪ್ ಮೂಲಕ ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ವೀಡಿಯೊ ಕಾಲ್ ಮೂಲಕ ರೋಗಿಗಳ ರೋಗ ಲಕ್ಷಣಗಳನ್ನು ತಿಳಿದುಕೊಳ್ಳುವ ವೈದ್ಯರು ಔಷಧ, ಸಲಹೆ, ಮಾರ್ಗದರ್ಶನ ನೀಡುವರು. ರೋಗಿ ಆಸ್ಪತ್ರೆಗೆ ಭೇಟಿ ನೀಡಬೇಕಿದ್ದರೆ ಈ ಬಗ್ಗೆಯೂ ನಿರ್ದೇಶನ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಯೋಜನೆಯ ವೆನ್ಲಾಕ್ ಆಸ್ಪತ್ರೆ ನೋಡೆಲ್ ಅಧಿಕಾರಿ ಡಾ. ಸದಾನಂದ ಪೂಜಾರಿ ಮಾತನಾಡಿ, ಟೆಲಿ ಸಮಾಲೋಚನಾ ಸೇವೆಗಾಗಿ ಮೊಬೈಲ್‌ನ ಪ್ಲೇಸ್ಟೋರ್ ಅಥವಾ ಗೂಗಲ್‌ನಲ್ಲಿ ಇ-ಸಂಜೀವನಿ ಒಪಿಡಿ ಎಂದು ನಮೂದಿಸಿದರೆ ಕೇಂದ್ರ ಆರೋಗ್ಯ ಸಚಿವಾಲಯದ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ರಿಜಿಸ್ಟ್ರೇಷನ್ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಸಂಖ್ಯೆ ಬರುತ್ತದೆ. ಈ ಒಟಿಪಿ ನಮೂದಿಸಿದರೆ ರಿಜಿಸ್ಟ್ರೇಷನ್ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ದೊರೆಯಲಿದೆ. ಟೋಕನ್ ನಂಬರ್ ನೀಡಿ, ರೋಗಿ ನಮೂದಿಸಿದ ವಿಭಾಗದ ತಜ್ಞ ವೈದ್ಯರನ್ನು ವಿಡಿಯೊ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆ ಪ್ರತಿದಿನ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಲಭ್ಯ. ಒಮ್ಮೆ ನೋಂದಣಿ ಆದವರು ಮತ್ತೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!