ಮಂಡ್ಯ: ಕೊರೋನಾ ಸೋಂಕು ಬಂದವರನ್ನು ಅಸ್ಪೃಶ್ಯರಂತೆ ಕಾಣುವಂತಹ ವಾತಾವರಣ ನಿರ್ಮಾಣವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ವಿಷಾದಿಸಿದರು.
ನಗರದ ಹೊರವಲಯದಲ್ಲಿರುವ ಅಗ್ರಿಸಂಸ್ಥೆ ಆವರಣದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಜಿಲ್ಲೆ 317ಎ, ಟಾಟಾ ಎಜುಕೇಷನ್ ಮತ್ತು ಅಭಿವೃದ್ಧಿ ದತ್ತಿ ಸಂಸ್ಥೆ, ಮುಂಬೈ, ಜಿಲ್ಲಾ ಲಯನ್ಸ್ ಸರ್ವಿಸ್ ಫೌಂಡೇಶನ್, ಜಿಲ್ಲಾ ಲಯನ್ಸ್ ಸೇವಾ ಸಂಸ್ಥೆಗಳು ಆಯೋಜಿಸಿದ್ದ 25 ಲಕ್ಷ ರೂ.ಗಳ ಕೊವಿಡ್-19ರ ಪರಿಕರ ಸಾಮಾಗ್ರಿಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ತಗುಲಿದವರನ್ನೂ ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪಾತ್ರ ಅಪಾರವಾಗಿದೆ ಎಂದು ಹೇಳಿದರು.
ಕೊವಿಡ್-19ರಿಂದ ತಲ್ಲಣವೇ ಆರಂಭವಾಗಿದೆ, ಮಾನವೀಯ ಸಂಬಂಧಗಳಿಗೆ ದೊಡ್ಡ ಸಮಸ್ಯೆಯಾಗಿದ್ದು, ಭಯ-ಬೀತಿಯಂತಹ ವಾತವಾರಣ ನಿರ್ಮಾಣ ವಾಗಿರುವಂತಹವುದನ್ನು ನೋಡುತ್ತಿದ್ದೇವೆ, ಇದರ ಜೊತೆಗೆ ಬಡವ ಬಲ್ಲಿದ ಎನ್ನದೆ ನಾನಾ ರೀತಿಯ ಸಮಸ್ಯೆಗಳು ಪ್ರತಿಯೊಬ್ಬರಲ್ಲೂ ಕಾಡುತ್ತಿವೆ ಎಂದು ನುಡಿದರು.
ದಿನ ನಿತ್ಯದ ಜೀವನ ನಡೆಸುವ ಸಾಮಾನ್ಯ ವ್ಯಕ್ತಿಗಳಿಗೆ ಕೊವಿಡ್-19 ದೊಡ್ಡ ಆಘಾತವನ್ನೇ ನೀಡಿದೆ, ಇಂತಹ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಗಳು ಸೇರಿದಂತೆ ಕೆಲವು ಸಂಘ-ಸಂಸ್ಥೆಗಳು ಸಮಾಜಪರವಾಗಿ ಸೇವೆ ಮಾಡಿಕೊಂಡು, ಕೊವಿಡ್ ನಿಯಂತ್ರಣದಲ್ಲಿ ತಮ್ಮದೇ ಕಾಣಿಕೆಗಳನ್ನು ನೀಡಿ, ಸಮಾಜಕ್ಕೆ ಒಳಿತು ಮಾಡುವ ಸಂದೇಶವನ್ನು ನೀಡುತ್ತಿವೆ ಎಂದರು.