Wednesday, August 10, 2022

Latest Posts

ಕೊರೋನಾ ಸೋಂಕಿತರಿಗೆ ಇನ್ನೂ 950 ಬೆಡ್ ಸಿದ್ಧ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನೂ 950 ಬೆಡ್ ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ಕೋವಿಡ್ ಬೆಡ್‍ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದೆ. ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದರು.

771ಮಂದಿ ಮಾತ್ರ ವಿವಿಧ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದ್ದು, ಪ್ರತಿ ದಿನ 950 ಜನರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗಿದೆ ಎಂದು ಹೇಳಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಸ್ತುತ 233ಮಂದಿ ಇದ್ದಾರೆ. ವಿವಿಧ ಕಡೆಗಳಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 436ಮಂದಿ ಇದ್ದಾರೆ. ಇನ್ನೂ 550ಬೆಡ್ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೂ 400 ಬೆಡ್‍ಗಳು ಸಜ್ಜುಗೊಳಿಸಲಾಗುತ್ತಿದೆ. ಪ್ರಸ್ತುತ 37ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 300ಬೆಡ್‍ಗಳ ಸೌಲಭ್ಯ ಸಿದ್ಧವಿದೆ ಎಂದರು.

ಹೋಂ ಕ್ವಾರೆಂಟೈನ್‍ ನಲ್ಲಿರುವವರನ್ನು ತಪಾಸಣೆ ನಡೆಸಲು ಪ್ರಸ್ತುತ ಶಿವಮೊಗ್ಗ ನಗರದಲ್ಲಿ 5ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಸಮಸ್ಯೆ ಅಹವಾಲುಗಳನ್ನು ಸಹಾಯವಾಣಿ ಸಂಖ್ಯೆ 08182-221010, 08182-220082 ಕರೆ ಮಾಡಿ ಸಲ್ಲಿಸಬಹುದಾಗಿದೆ. ಅಹವಾಲುಗಳಿಗೆ ತಕ್ಷಣ ಪ್ರತಿಕ್ರಿಯಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಡಿಹೆಚ್ಒ ಡಾ.ರಾಜೇಶ ಸುರಗಿಹಳ್ಳಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss