ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೋನಾ ವೈರಸ್ ಸೋಂಕಿತರು ಆಸ್ಪತ್ರೆಗಳನ್ನು ಹುಡುಕಿಕೊಂಡು ಅಲೆದಾಡಬೇಕಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ನಿಮ್ಮ ಮನೆಗೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಿದೆ.
ಕಳೆದ ಎರಡು ದಿನಗಳಿಂದ ಕೆಲವು ರೋಗಿಗಳು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ರೋಗಿಗಳು ಆಸ್ಪತ್ರೆ ಹುಡುಕಿಕೊಂಡು ಅಲೆಯಬೇಕಿಲ್ಲ ಎಂದು ಹೇಳಿದ್ದಾರೆ.
ರೋಗಿಯ ಕೊರೋನಾ ವೈರಸ್ ಪರೀಕ್ಷೆ ವರದಿ ಐಸಿಎಂಆರ್ ಮೂಲಕ ಬಿಬಿಎಂಪಿಗೆ ರವಾನೆಯಾಗುತ್ತದೆ. ವರದಿ ಬಂದ ತಕ್ಷಣ ಆಂಬ್ಯುಲೆನ್ಸ್ನಲ್ಲಿ ಬಿಬಿಎಂಪಿ ಸಿಬ್ಬಂದಿಯೇ ಮನೆಗೆ ಬಂದು ರೋಗಿಗಳನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಲಿದ್ದಾರೆ.
ಬಿಬಿಎಂಪಿ ಕೋವಿಡ್ ವಾರ್ ರೂಂನಲ್ಲಿ ನಗರದ ಆಸ್ಪತ್ರೆಗಳಲ್ಲಿ ಇರುವ ಬೆಡ್ಗಳ ಸಂಖ್ಯೆ ತಿಳಿಯಲಿದೆ. ಇದಕ್ಕಾಗಿ ಸಾಫ್ಟ್ವೇರ್ ಒಂದನ್ನು ಮಾಡಲಾಗುತ್ತಿದ್ದು, 4 ದಿನಗಳಲ್ಲಿ ಅದು ಲಭ್ಯವಾಗಲಿದೆ. ಆಗ ಆಸ್ಪತ್ರೆಗಳ ಹುಡುಕಾಟ ಇನ್ನೂ ಸುಲಭವಾಗಲಿದೆ.