ಚಿಕ್ಕಮಗಳೂರು: ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ ವೃದ್ಧೆಯೊಬ್ಬರ ಮೈಮೇಲಿದ್ದ ತಾಳಿ ಸರವನ್ನು ಅಪಹರಿಸಿ, 10 ದಿನಗಳ ನಂತರ ಸಿಕ್ಕಿಬೀಳುವ ಭಯದಲ್ಲಿ ಅದನ್ನು ಜಿಲ್ಲಾ ಸರ್ಜನ್ ಕಚೇರಿ ಬಳಿ ತಂದಿಟ್ಟಿರುವ ಕೀಳುಮಟ್ಟದ ಕೃತ್ಯವೊಂದು ನಗರದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.
ಬಿಳಿಯ ಕಾಗದವೊಂದರಲ್ಲಿ ಸಾರಿ ಎಂದು ಎಂದು ಬರೆದು ಅದರಲ್ಲೇ ತಾನು ಕದ್ದಿದ್ದ ತಾಳಿ ಸರವನ್ನು ಮುದುರಿ ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್ ಕುಮಾರ್ ಅವರ ಕಚೇರಿಬಳಿ ಸೋಮವಾರ ಬೆಳಗ್ಗೆ ಹಾಕಲಾಗಿತ್ತು. ಅದನ್ನು ಪೊಲೀಸರಿಂದಲೇ ತೆಗೆಸಿ ನೋಡಿದಾಗ ಚಿನ್ನದ ತಾಳಿ ಸರ ಇರುವುದು ಕಂಡುಬಂದಿದೆ. ಆದರೆ ಸರ ಕದ್ದಿದ್ದ ಆರೋಪಿ ಯಾರೆಂದು ಗೊತ್ತಾಗಿಲ್ಲವಾದರೂ, ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗಳೇ ಭಾಗಿಯಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಘಟನೆ ಹಿನ್ನೆಲೆ
ಕರೋನಾ ಸೊಂಕು ತಗುಲಿದ್ದ ಹಿನ್ನೆಲೆಯಲ್ಲಿ ನಗರದ ತೇಗೂರು ಗ್ರಾಮದ ವೃದ್ಧ ದಂಪತಿಗಳಿಬ್ಬರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಪತ್ನಿ ಆಗಸ್ಟ್ 10 ರಾತ್ರಿ 11.15 ರ ಸುಮಾರಿಗೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಮರುದಿನ ಕೋವಿಡ್ ನಿಯಮಾಳಿಗಳ ಪ್ರಕಾರ ಆಸ್ಪತ್ರೆ ಸಿಬ್ಬಂದಿಗಳು ಶವವನ್ನು ಅಲ್ಲಿಂದ ನೇರವಾಗಿ ಮುಕ್ತಿಧಾಮ ಚಿತಾಗಾರಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಅದೇದಿನ ಮೃತರ ಅಳಿಯ ರಾಜೇಶ್ ಅವರು ತಮ್ಮ ಅತ್ತೆಯ ಮೈಮೇಲಿದ್ದ ಚಿನ್ನದ ತಾಳಿ ಸರ ಸೇರಿದಂತೆ ಇತರೆ ಆಭರಣಗಳನ್ನು ಹಿಂತಿರುಗಿಸುವಂತೆ ಆಸ್ಪತ್ರೆ ಸಿಬ್ಬಂದಿಯಲ್ಲಿ ಕೇಳಿಕೊಂಡಾಗ ರಾತ್ರಿ ಕರ್ತವ್ಯದಲ್ಲಿದ್ದವರನ್ನೇ ಕೇಳಬೇಕು ಎಂದು ಉತ್ತರ ಸಿಕ್ಕಿದೆ.
ಮರುದಿನ ಸಿಬ್ಬಂದಿಗಳನ್ನು ವಿಚಾರಿಸಿದಾಗ ನಮ್ಮ ಬಳಿ ತಾಳಿ ಸರ ಮತ್ತು ಉಂಗುರ ಇಲ್ಲ ಉಳಿದ ವಸ್ತುಗಳು ಮಾತ್ರ ಇವೆ ಎಂದಿದ್ದರು. ಇದರಿಂದ ಬೇಸತ್ತ ರಾಜೇಶ್ ಜಿಲ್ಲಾ ಸರ್ಜನ್ ಡಾ.ಮೋಹನ್ ಅವರನ್ನು ಭೇಟಿ ಮಾಡಿ ತಮ್ಮ ಅತ್ತೆಯ ಮೈಮೇಲಿದ್ದ ಚಿನ್ನದ ತಾಳಿ ಸರ, ಕಿವಿಯೋಲೆ, ಬಳೆಗಳು, ಒಂದು ಚಿನ್ನದ ಉಂಗುರ ಮತ್ತು ಕಾಲುಂಗುರ ಇಷ್ಟನ್ನು ಕೊಡಿಸುವಂತೆ ಲಿಖಿತ ಮೂಲಕ ಮನವಿ ಮಾಡಿದ್ದರು.
ವೃದ್ಧೆ ಮುತ್ತೈದೆಯಾಗಿಯೇ ಮೃತಪಟ್ಟಿರುವುದರಿಂದ ತಾಳಿ ಸರವನ್ನು ಪೂಜಿಸುವುದು ತಮ್ಮ ಪದ್ಧತಿಯಾದ ಕಾರಣ ಅವರ ಮನೆಯವರು ತಿಥಿ ಕಾರ್ಯಕ್ರಮದೊಳಗಾಗಿ ತಾಳಿ ಸರ ಕೊಡಿಸುವಂತೆ ಒತ್ತಡ ಹೇರಲಾರಂಭಿಸಿದ್ದರು.
ಅಷ್ಟರಲ್ಲಾಗಲೇ 13 ದಿನ ಕಳೆದು ಹೋಗಿತ್ತು. 14 ನೇ ದಿನವಾದ ಸೋಮವಾರ ಬೆಳಗ್ಗೆ ಕಳ್ಳ ಮಾಂಗಲ್ಯ ಸರವನ್ನಂತೂ ತಂದಿಟ್ಟಿದ್ದಾನೆ. ಆದರೆ ಆತ ಯಾರೆಂದು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲೇಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಕೋವಿಡ್-19 ನಂತಹ ಸಂಕಷ್ಟದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಶವದ ಮೈಮೇಲಿರುವ ಆಭರಣಗಳನ್ನೂ ಕಳವು ಮಾಡುವ ಕೀಳುಮಟ್ಟಕ್ಕೆ ಯಾರೂ ಇಳಿಯಬಾರದು. ಸತ್ತವರ ಮುಖವನ್ನೂ ನೋಡಲಾಗದೆ ನೋವು ಅನುಭವಿಸುವ ಕುಟುಂಬಸ್ಥರನ್ನು ಇನ್ನಷ್ಟು ಪೀಡಿಸುವಂತಹ ಕೃತ್ಯ ಅಮಾನವೀಯ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.