ಬೆಂಗಳೂರು: ಕೊರೋನಾ ಸೋಂಕಿನ ಭೀತಿಯ ನಡುವೆಯೂ ರಾಜ್ಯ ಸರಕಾರ ಮದುವೆಗೆ ಅವಕಾಶ ನೀಡಲಾಗಿತ್ತು. ಅದರಲ್ಲೂ 50 ಜನರಿಗೆ ಮಾತ್ರವೇ ಸೀಮಿತಗೊಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ 50 ಜನರಿಗಿಂತ ಹೆಚ್ಚು ಜನರು ಮದುವೆಗೆ ಸೇರುವಂತಿಲ್ಲ. ಒಂದು ವೇಳೆ ಅದಕ್ಕಿಂತಲೂ ಹೆಚ್ಚಿನ ಜನರು ಸೇರಿದ್ದೇ ಆದಲ್ಲಿ, ಮದುವೆ ನಡೆಸುತ್ತಿರುವವರಿಗೆ ದಂಡ ವಿಧಿಸಲಾಗುತ್ತದೆ ಎಂಬುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ 50 ಜನರಿಗಷ್ಟೇ ಮದುವೆಯಲ್ಲಿ ಭಾಗವಹಿಸಿ, ಮದುವೆ ಕಾರ್ಯ ನಡೆಸಲು ಅನುಮತಿಸಲಾಗಿದೆ. ಆದರೂ ಅನೇಕ ಕಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ 50 ಜನರಿಗಿಂತ ಹೆಚ್ಚು ಜನರು ಸೇರಿದರೆ ಅಂತಹ ಮದುವೆ ಕಾರ್ಯಕ್ರಮ ನಡೆಸುವವರಿಗೆ ದಂಡ ವಿಧಿಸಲಾಗುತ್ತದೆ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸೋದರ ಬಗ್ಗೆ ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸಲಾಗುತ್ತಿದೆ. ಮಾಸ್ಕ್ ಧರಿಸದೇ ನಗರ ಪ್ರದೇಶಗಳಲ್ಲಿ ಓಡಾಡುವ ಜನರಿಗೆ ರೂ.1000 ದಂಡ ವಿಧಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೂ.500 ದಂಡವನ್ನು ವಿಧಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.