Tuesday, August 9, 2022

Latest Posts

“ಕೊರೋನಾ” ಸೋಂಕು ಗ್ರಾಮೀಣ ಪ್ರದೇಶಗಳ ವ್ಯಾಪಿಸದಂತೆ ಎಚ್ಚರಿಕೆ ವಹಿಸಬೇಕು: ಡಾ.ವೀರೇಂದ್ರ ಹೆಗ್ಗಡೆ

ಮೈಸೂರು: ಕೊರೋನಾ ಎಂಬ ಮೂಕಾಸುರ ಈಗ ನಗರ ಪ್ರದೇಶಗಳನ್ನು ವ್ಯಾಪಿಸಿಕೊಂಡಿದ್ದಾನೆ, ಆತ ಗ್ರಾಮೀಣ ಪ್ರದೇಶಗಳನ್ನು ವ್ಯಾಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿ ತಡೆಗಟ್ಟಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಶನಿವಾರ ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶ್ರೀಶಿವರಾತ್ರಿ ರಾಜೇಂದ್ರಸ್ವಾಮಿಗಳ ೧೦೫ ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕೋವಿಡ್-೧೯ ಸವಾಲು ಹಾಗೂ ಸ್ಥೆöÊರ್ಯದ ನಿರ್ವಹಣೆ ಸಂವಾದ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಯಕ್ಷಗಾನದಲ್ಲಿ ಮಾತನಾಡದ ರಾಕ್ಷಸನನ್ನು ಮೂಕಾಸೂರ ಎಂದು ಕರೆಯುತ್ತೇವೆ. ಅದೇ ರೀತಿ ಕೊರೋನಾ ಎಂಬ ಮೂಕಾಸುರ ಮಾತನಾಡುವುದಿಲ್ಲ, ಇದರಲ್ಲಿ ರಾಕ್ಷಿಸಿ ಸ್ವಭಾವವಿದೆ. ಹಿಂಸಿಸುತ್ತದೆ. ವ್ಯಾಪಿಸುತ್ತಿದೆ. ಈಗಾಗಲೇ ನಗರ ಪ್ರದೇಶಗಳನ್ನು ಆವರಿಸಿಕೊಂಡು ತಾಂಡವಾಡುತ್ತಿದೆ. ಇದೀಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರೂ ಸೋಂಕಿಗೆ ಒಳಗಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುತ್ತಿದ್ದಾರೆ. ಹಾಗಾಗಿ ಕೊರೋನಾ ಮೂಕಾಸುರ ಗ್ರಾಮೀಣ ಪ್ರದೇಶಗಳನ್ನು ಆವರಿಸಿಕೊಂಡರೆ, ಬಹಳ ಅಪಾಯ. ಹಾಗಾಗಿ ಆತ ಗ್ರಾಮೀಣ ಪ್ರದೇಶಗಳಿಗೆ ಬಾರದಂತೆ ತಡೆಯಬೇಕಿದೆ , ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕಾಗಿದೆ. ಮೂಕಾಸುರ ಬೆಳೆಯದಂತೆ ಕತ್ತರಿಸಿ ಹಾಕಬೇಕಾಗಿದೆ ಎಂದರು.
ಕೊರೋನಾ ಸೋಂಕಿನ ಬಗ್ಗೆ ಉದಾಸೀನತೆ, ಬೇಜಾವಾಬ್ದಾರಿ ಬೇಡಾ, ಹಾಗೆಯೇ ಸೋಂಕು ಬಂದರೆ ಸಾಯುತ್ತಾರೆ ಎಂಬ ಭಯವೂ ಬೇಡಾ, ಸೋಂಕು ಹರಡದಂತೆ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ. ಆ ಮೂಲಕ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಸ್ವಯಂ ಸಂಸ್ಥೆಗಳು, ಸರ್ಕಾರದ ವಿರುದ್ಧ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು. ಯುವಕರು ಕೊರೋನಾ ಸೋಂಕಿನ ಬಗ್ಗೆ ಬಹಳ ಉದಾಸೀನತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸೋಂಕು ಬಂದರೆ, ಬರಲೀ ತಮಗೇನು ಆಗುವುದಿಲ್ಲ ಎಂದು ಯಾವುದೇ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸದೆ ಸ್ವೇಚ್ಚಾಚಾರದಿಂದ ವರ್ತಿಸುತ್ತಿದ್ದಾರೆ. ಆ ಮೂಲಕ ಮತ್ತಷ್ಟು ಜನರಿಗೆ ಸೋಂಕು ಹರಡಲು ಕಾರಣರಾಗುತ್ತಿದ್ದಾರೆ. ಹಾಗಾಗಿ ಯುವಕರನ್ನು ನಿಯಂತ್ರಿಸದಿದ್ದರೆ, ಅವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳದಿದ್ದರೆ ಸೋಂಕು ಹರಡುವಿಕೆಯನ್ನು ತಡೆಯಲು ಕಷ್ಟವಾಗುತ್ತದೆ ಎಂದರು.
ಇನ್ಪೋಸೀಸ್ ಫೌಂಡೇಶನ್‌ನ ಅಧ್ಯಕ್ಷೆ ಡಾ.ಸುಧಾಮೂರ್ತಿ ಮಾತನಾಡಿ, ಕೊರೋನಾ ಸೋಂಕಿನ ವಿರುದ್ಧ ಸ್ವಯಂ ಸಂಸ್ಥೆಗಳು, ಸಂಘಟನೆಗಳು ಸರ್ಕಾರದೊಂದಿಗೆ ಸೇರಿ ಹೋರಾಟ ನಡೆಸುತ್ತಿವೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಹೋರಾಟಕ್ಕೆ ಕೈಜೋಡಿಸಿದರೆ ಕೊರೋನಾವನ್ನು ಮಣಿಸಬಹುದು. ಕೊರೋನಾ ಸೋಂಕು ಹರಡುವಿಕೆ ತಡೆಯುವುದಕ್ಕಾಗಿ ತಂತ್ರಜ್ಞಾನವನ್ನೂ ಹೆಚ್ಚು, ಹೆಚ್ಚಾಗಿ ಬಳಸಿಕೊಳ್ಳಬೇಕಾಗಿದೆ. ಈಗಾಗಲೇ ಕರ್ನಾಟಕದಲ್ಲಿಯೇ ಆಪ್ತ ಮಿತ್ರ ಆರೋಗ್ಯ ಆಪ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಇದೇ ರೀತಿ ಇನ್ನೂ ಅನೇಕ ಆಪ್‌ಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಮುಖ್ಯವಾಗಿ ಯಾವ್ಯಾವ ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಯಾವ್ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳು ಖಾಲಿಯಿವೆ ಎಂದು ಜನರಿಗೆ ತಿಳಿಸುವ ಆಪ್‌ನ್ನು ಅಭಿವೃದ್ಧಿಪಡಿಸಿ ಚಾಲ್ತಿಗೆ ತಂದರೆ, ಸೋಂಕಿತರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿ, ಕೊರೋನಾ ಸೋಂಕಿಗೆ ಹೆಚ್ಚಾಗಿ ಹಿರಿಯರು, ಮಕ್ಕಳು ತುತ್ತಾಗದಂತೆ ಯುವಕರು ಬಹಳ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಅವರ ರಕ್ಷಣೆಯನ್ನು ಮಾಡಬೇಕಾಗಿದೆ. ಕೊರೋನಾಗೆ ಲಸಿಕೆ ಸಿಗುವ ತನಕ ನಮ್ಮ ಜೀವನ ಶೈಲಿ, ಆರ್ಥಿಕ ಚಟುವಟಿಕೆಗಳನ್ನು ಬದಲಾಯಿಸಿಕೊಂಡು ಬದುಕಬೇಕಾದ ಅನಿವಾರ್ಯತೆಯಿದೆ. ಅದಕ್ಕಾಗಿ ಸರ್ಕಾರ ಜಾರಿಗೆ ತರುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು, ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಜನರಲ್ಲಿ ಆತ್ಮಸೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌವರ್ನರ್ ಡಾ.ಮನೋಜ್ ಸಿನ್ಹ ಉದ್ಘಾಟಿಸಿದರು. ಸಾನಿಧ್ಯವನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ವಹಿಸಿದ್ದರು. ಚಿತ್ರ ನಟ ದರ್ಶನ್ ಭಾಗವಹಿಸಿದ್ದರು. ಜೆಎಸ್‌ಎಸ್ ಎಎಚ್ ಇಆರ್‌ನ ಸಮಕುಲಾಧಿಪತಿಯಾದ ಡಾ.ಬಿ.ಸುರೇಶ್ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss