ಕೊರೋನಾ ಹಿನ್ನೆಲೆ:ಕೇರಳ- ಕೊಡಗಿನ ಗಡಿಪ್ರದೇಶವಾದ ಕುಟ್ಟ ಪಟ್ಟಣದಲ್ಲಿ ವಾರದಲ್ಲಿ ಎರಡು ದಿನ ಬಂದ್

0
31

ಪೊನ್ನಂಪೇಟೆ: ಕೊರೋನಾ ವೈರಸ್ ಸೊಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಂಚಿನಲ್ಲಿರುವ ಕೊಡಗಿನ ಗಡಿಪ್ರದೇಶವಾದ ಕುಟ್ಟ ಪಟ್ಟಣದಲ್ಲಿ ವಾರದ ಮಂಗಳವಾರ ಹಾಗೂ ಭಾನುವಾರ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಲಾಕ್‍ಡೌನ್ ಮಾಡಲು ಸ್ಥಳೀಯ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತ ನಿರ್ಧಾರ ಕೈಗೊಂಡಿದ್ದಾರೆ.
ಕುಟ್ಟ ಮಸೀದಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಜೂ. 30ರಂದು ಕುಟ್ಟದಲ್ಲಿ ನಡೆಯುವ ಸಂತೆಯನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ ವಾರದ ಇತರ ದಿನಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಮೂರು ವಾರ ಹೋಂಸ್ಟೇ ಬಂದ್
ಸಭೆಯಲ್ಲಿ ಕುಟ್ಟ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಹೋಂ ಸ್ಟೇಗಳನ್ನು ಸೋಮವಾರದಿಂದ ಅನ್ವಯವಾಗುವಂತೆ ಮುಂದಿನ ಮೂರು ವಾರದವರೆಗೆ ಮುಚ್ಚುವುದಾಗಿ ಸಭೆಯಲ್ಲಿ ಹಾಜರಿದ್ದ ಹೋಂ ಸ್ಟೇ ಮಾಲಕರು ತಮ್ಮ ಸ್ವಯಂ ನಿರ್ಧಾರ ಪ್ರಕಟಿಸಿದರು.
ಪೊಲೀಸ್ ಇಲಾಖೆಯಲ್ಲಿ ಪರವಾಗಿ ಸಭೆಯಲ್ಲಿ ಹಾಜರಿದ್ದ ಎ.ಎಸ್.ಐ ಮೊಹಿದ್ದೀನ್ ಅವರು ಮಾತನಾಡಿ, ನಾಗರಿಕರು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಬೇಕು. ಇಲ್ಲದಿದ್ದರೆ 200 ರೂ. ದಂಡ ವಿಧಿಸಲಾಗುವುದು. ಈ ನಿಟ್ಟಿನಲ್ಲಿ ಕುಟ್ಟ ವ್ಯಾಪ್ತಿಯಲ್ಲಿ ಪೊ ಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಕೇರಳದಿಂದ ಗಡಿ ಗೇಟ್ ಮೂಲಕ ಜಿಲ್ಲೆಗೆ ಪ್ರವೇಶಿಸುವುದು ಅಥವಾ ಕೇರಳಕ್ಕೆ ತೆರಳುವುದನ್ನು ತಡೆಗಟ್ಟಲು ರಸ್ತೆಗೆ ಮಣ್ಣು ಹಾಕಿ ತಡೆ ಮಾಡಲಾಗಿದೆ. ಆದರೂ ಆ ಮೂಲಕ ತೆರಳಲು ಪ್ರಯತ್ನಿಸುವುದನ್ನು ತಡೆಯಲು ಗಡಿ ಗೇಟಿನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕುಟ್ಟ ವರ್ತಕರ ಸಂಘದ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಪಿ.ಡಿ.ಓ ಹೆಚ್.ಎಸ್ ಅನಿಲ್ ಕುಮಾರ್, ಸದಸ್ಯರಾದ ಹೆಚ್.ವೈ. ರಾಮಕೃಷ್ಣ, ತೀತಿರ ರುಕ್ಮಿಣಿ, ಹೋಂ ಸ್ಟೇ ಮಾಲಕರಾದ ಮಚ್ಚಮಾಡ ಪ್ರಕಾಶ್, ತೀತಿರ ಕಬೀರ್, ತೀತಿರ ರಾಜ ಮತ್ತಿತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here