Wednesday, July 6, 2022

Latest Posts

ಕೊರೋನಾ ಹೆಮ್ಮಾರಿ ಎಫೆಕ್ಟ್ : ಮುಂದುವರಿದ ದೇಶಗಳಲ್ಲಿ ಚೀನಾ ವಿಶ್ವಾಸಾರ್ಹತೆ ಪತನ!

ತೈಪೇ: ವಿಶ್ವಕ್ಕೆ ಕೊರೋನಾ ಹೆಮ್ಮಾರಿಯನ್ನು ಹರಡಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ ಕೋಟಿ ಕೋಟಿ ಜನರ ಬದುಕನ್ನೇ ಉಧ್ವಸ್ತಗೊಳಿಸಿದ ಮತ್ತು ನೆರೆಯ ದೇಶಗಳ ಜೊತೆ ರಾಜತಾಂತ್ರಿಕ ತಿಕ್ಕಾಟಕ್ಕಿಳಿದಿರುವ ಕಮ್ಯುನಿಸ್ಟ್ ದೇಶ ಚೀನಾಬಗ್ಗೆ ಜಗತ್ತಿನ ಮುಂದುವರಿದ ದೇಶಗಳಲ್ಲಿನ ಜನತೆ ಈಗ ತೀವ್ರ ತಿರಸ್ಕಾರ ಭಾವವನ್ನು ಹೊಂದಿರುವುದು ಸಮೀಕ್ಷೆಯೊಂದರಿಂದ ವ್ಯಕ್ತವಾಗಿದೆ. ಚೀನಾದ ವಿಶ್ವಾಸಾರ್ಹತೆ ಕುಸಿತವು ಕಳೆದ ವರ್ಷಕ್ಕಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
೧೪ದೇಶಗಳಲ್ಲಿ ಪಿವ್ ರೀಸರ್ಚ್ ಸೆಂಟರ್ ನಡೆಸಿದ ಹೊಸ ಸಮೀಕ್ಷೆಯಲ್ಲಿ ಚೀನಾವಿರುದ್ಧದ ನಕಾರಾತ್ಮಕ ಭಾವನೆ ತೀವ್ರವಾಗಿ ಹೆಚ್ಚಳಗೊಂಡಿರುವುದು ಕಂಡುಬಂದಿದೆ.ಕೋವಿಡ್-೧೯ ಮತ್ತು ಜಗತ್ತಿನ ಅನೇಕ ದೇಶಗಳ ಜೊತೆ ವ್ಯಾಪಾರ ಸಂಘರ್ಷ ಹಾಗೂ ತನ್ನ ನೆರೆಯ ದೇಶಗಳ ಜೊತೆ ಆಕ್ರಮಣಕಾರಿ ರಾಜತಾಂತ್ರಿಕ ತಿಕ್ಕಾಟಗಳನ್ನು ಹೊಂದಿರುವ ಚೀನಾ ವಿಶ್ವಾಸಾರ್ಹ ದೇಶವಲ್ಲ ಎಂಬುದಾಗಿ ಈ ದೇಶಗಳಲ್ಲಿನ ಜನತೆ ಅಭಿಪ್ರಾಯಪಟ್ಟಿದೆ.
ಜೂ.೧೦ರಿಂದ ಆ.೩ರ ನಡುವೆ ಆಸ್ಟ್ರೇಲಿಯಾ, ಬ್ರಿಟನ್, ಸ್ಪೈನ್,ಜರ್ಮನಿ,ಅಮೆರಿಕ, ಕೆನಡಾ, ಬೆಲ್ಜಿಯಂ,ಡೆನ್ಮಾರ್ಕ್, ಫ್ರಾನ್ಸ್, ಇಟೆಲಿ, ನೆದರ್‌ಲ್ಯಾಂಡ್ಸ್, ಸ್ವೀಡನ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಶೇ.೮೧ರಷ್ಟು ಜನರು ತಾವು ಚೀನಾ ಬಗ್ಗೆ ಸದಭಿಪ್ರಾಯ ಹೊಂದಿಲ್ಲ ಎಂದಿದ್ದಾರೆ. ಇಂತಹ ಭಾವನೆ ಹೊಂದಿರುವ ಆಸ್ಟ್ರೇಲಿಯನ್ನರ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.೨೪ರಷ್ಟು ಹೆಚ್ಚಾಗಿದೆ.ಕೊರೋನಾ ವೈರಸ್ ಮೂಲದ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಸಬೇಕೆಂದು ಆಸ್ಟ್ರೇಲಿಯಾ ಆಗ್ರಹಿಸಿದ ಬಳಿಕ ಚೀನಾ ಮತ್ತು ಆ ದೇಶದ ನಡುವಣ ಸಂಬಂಧ ಹಳಸಿದೆ. ಚೀನಾ ಪ್ರತೀಕಾರದ ಕ್ರಮವೊಂದರಲ್ಲಿ ಆಸ್ಟ್ರೇಲಿಯಾದ ಬೀಫ್, ವೈನ್ ಆಮದಿನ ಮೇಲೆ ಚೀನಾ ನಿರ್ಬಂಧ ಹೇರಿದೆ.
ಬ್ರಿಟನ್‌ನ ಶೇ.೭೪ರಷ್ಟು ಮಂದಿ ತಾವು ಚೀನಾದ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುವುದಾಗಿ ತಿಳಿಸಿದ್ದಾರೆ.ಇದು ಕಳೆದ ವರ್ಷಕ್ಕಿಂತ ಶೇ.೧೯ರಷ್ಟು ಹೆಚ್ಚಾಗಿದೆ.ಜರ್ಮನಿಯಲ್ಲಿ ಶೇ.೭೧ರಷ್ಟು ಮಂದಿ ಇಂತಹ ಭಾವನೆ (ಶೇ.೧೫ರಷ್ಟು ಹೆಚ್ಚಳ)ತಾಳಿದ್ದರೆ, ಅಮೆರಿಕದಲ್ಲಿ ಶೇ.೭೩(ಶೇ.೧೩ರಷ್ಟು ಹೆಚ್ಚಳ)ರಷ್ಟು ಮಂದಿ ಚೀನಾ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ.
ಈ ದೇಶಗಳಲ್ಲಿನ ಆರ್ಥಿಕ ಸಂಪನ್ನರು ಮತ್ತು ಬಡವರು, ಕಡಿಮೆ ಮತ್ತು ಹೆಚ್ಚು ಶಿಕ್ಷಣ ಹೊಂದಿದವರೆಲ್ಲ ಒಂದೇ ರೀತಿಯಲ್ಲಿ ಚೀನಾದ ಬಗ್ಗೆ ತಿರಸ್ಕಾರ ಹೊಂದಿರುವುದು ಸಮೀಕ್ಷೆಯಲ್ಲಿ ಕಂಡುಬಂದಿರುವ ಮಹತ್ವದ ಅಂಶ.
ಜಗತ್ತಿಗೆ ಹರಡಿದ ಕೊರೋನಾ ನಿಯಂತ್ರಣದಲ್ಲಿ ಚೀನಾ ಯತ್ನ ತೀರಾ ಕೆಟ್ಟದಾಗಿತ್ತೆಂಬುದಾಗಿ ಶೇ.೬೧ರಷ್ಟು ಮಂದಿ ಹೇಳಿದ್ದು, ಅಮೆರಿಕದಲ್ಲಿ ಶೇ.೮೪ಮಂದಿ ಇಂತಹ ಅಭಿಪ್ರಾಯ ತಾಳಿದ್ದಾರೆ. ಜಾಗತಿಕ ವ್ಯವಹಾರಕ್ಕೆ ಸಂಬಂಸಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಗ್ಗೆ ವಿಶ್ವಾಸ ಇಡಲಾಗದೆಂದು ಶೇ.೭೮ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಜಾಗತಿಕ ವಿಷಯಗಳ ಕುರಿತಂತೆ ಗೊಂದಲಕಾರಿ ನಿಲುವು ತಾಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗೆಗೂ ಇಂತಹುದೇ ಅಭಿಪ್ರಾಯ ಹೊಂದಿರುವವರ ಪ್ರಮಾಣ ಶೇ.೮೩ರಷ್ಟಿದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss