Thursday, August 11, 2022

Latest Posts

ಕೊರೋನಾ ಹೊಡೆತಕ್ಕೆ ಕಂಗಾಲಾಗಿದ್ದ ದ್ರಾಕ್ಷಿ ಬೆಳೆಗಾರರಿಗೆ ಮತ್ತೊಂದು ಹೊಡೆತ ಕೊಟ್ಟ ಮಳೆರಾಯ!

ಪರಶುರಾಮ ಶಿವಶರಣ

ವಿಜಯಪುರ: ಬಿಸಿಲು ಕಾಣದ ಉತ್ತರ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಬದುಕು ಒಣಗಿ ಹೋಗಿದ್ದು, ನೇಸರನ ಆಗಮನಕ್ಕಾಗಿ ಬೇಸರದಿಂದ, ಆಕಾಶದತ್ತ ಮುಖಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರಖರ ಬಿಸಿಲು ಶಾಪದಂತೆ ಕಂಡು ಬಂದರೂ, ಈ ಭಾಗದ ದ್ರಾಕ್ಷಿ ಬೆಳೆಗಾರರ ಬದುಕಿಗೆ ಇದು ವರವಾಗಿದೆ. ಆದರೆ ಕಳೆದ ಜೂನ್ 15 ರಿಂದ ಪ್ರತಿಕೂಲ ವಾತಾವರಣ ಉಂಟಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಮುಸುಕು, ಮಳೆಯಿಂದಾಗಿ, ಇಲ್ಲಿನ ದ್ರಾಕ್ಷಿ ಬೆಳೆ ರೋಗ ಬಾಧೆಗೊಂಡು ಎಲೆಗಳು ಉದುರಿ ಬಿದ್ದಿವೆ. ಕೊರೋನಾ ಹೊಡೆತಕ್ಕೆ ಕಂಗಾಲಾಗಿದ್ದ ದ್ರಾಕ್ಷಿ ಬೆಳೆಗಾರರಿಗೆ, ಪ್ರಸ್ತುತ ಪ್ರತಿಕೂಲ ವಾತಾವರಣದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
31,600 ಹೆಕ್ಟೇರ್ ದ್ರಾಕ್ಷಿ ಬೆಳೆ 
ರಾಜ್ಯದಲ್ಲಿ 31, 600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಅದರಲ್ಲೂ ಉತ್ತರ ಕನಾಟಕ ಭಾಗದಲ್ಲಿ ಪ್ರಮುಖವಾಗಿದೆ. ವಿಜಯಪುರ 14,700 ಹೆಕ್ಟೇರ್, ಬಾಗಲಕೋಟೆ 3,400 ಹೆಕ್ಟೇರ್, ಬೆಳಗಾವಿ 2,700 ಹೆಕ್ಟೇರ್, ಕಲಬುರಗಿ 700 ಎಕರೆ ಹಾಗೂ ಕೊಪ್ಪಳ, ಯಾದಗಿರಿ, ಗದಗ, ಬೀದರ್ ಸೇರಿದಂತೆ ಈ ಭಾಗದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ.
ಬೆಳೆಗೆ ಬೇಕು ಎಳೆ ಬಿಸಿಲು 
ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಾದರೂ ದ್ರಾಕ್ಷಿ ಬೆಳೆಗಾರರ ಬದುಕಿನಲ್ಲಿ ಹಸಿರು ಕಾಣುತ್ತಿಲ್ಲ. ದ್ರಾಕ್ಷಿ ಬೆಳೆಗೆ ಮಳೆಗಿಂತ ಸದ್ಯ ಎಳೆ ಬಿಸಿಲು ಬೇಕಾಗಿದೆ. ಇದು ಚಾಟನಿ ಮಾಡುವ ಕಾಲ. ದ್ರಾಕ್ಷಿ ಬೆಳೆಗೆ ಮೋಡ, ಮಂಜು, ಮುಸುಕು, ತಂಪಿನ ವಾತಾವರಣ ಮಾರಕ. ಬರದ ಜಿಲ್ಲೆ ಬಿಸಿಲಿಗೆ ಹೆಸರು ವಾಸಿ. ಆದರೆ ಮಳೆಗಾಲದಿಂದಾಗಿ ಅದು ಉಸಿರು ಚೆಲ್ಲಿದೆ. ಆಕಾಶದಲ್ಲಿ ತಿಂಗಳಾನುಗಟ್ಟಲೆ ಮೋಡ ಮುಸುಕಿನ ವಾತಾವರಣವಿದೆ. ಆಗಾಗ ಕುಂಭದ್ರೋಣ ಮಳೆ ಸುರಿಯುತ್ತಿದೆ. ಹೀಗಾಗಿ ಈ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಸಿಲು ಬಂದರೆ, ದ್ರಾಕ್ಷಿ ಬೆಳೆಗಳ ಚಾಟನಿ ಮಾಡಿ, ಕಣ್ಣು, ಕಾಂಡ, ರೆಂಬೆ, ಕೊಂಬೆಗಳಿಗೆ ಔಷಧಿ ಬಳಿದು, ಮುಂದಿನ ಪ್ರಕ್ರಿಯೆಗಳಿಗಾಗಿ ರೈತರು ನಿರತರಾಗುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂಬರುವ ದ್ರಾಕ್ಷಿ ಬೆಳೆ ಸಂಪೂರ್ಣ ನೆಲಕಚ್ಚಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬೆಳೆಗಾರರು ಅಳಲುತೋಡಿಕೊಳ್ಳುತ್ತಾರೆ.

ಕೊರೋನಾ ಸಂಕಷ್ಟದಿಂದ ಮೊದಲೇ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಸದ್ಯ ಪ್ರತಿಕೂಲ ವಾತಾವರಣದಿಂದ ದ್ರಾಕ್ಷಿ ಬೆಳೆ ಹಾನಿಗೊಂಡಿದೆ. ಹೀಗಾಗಿ ತೆಂಗು ಹಾಗೂ ಕೊಬ್ಬರಿ ಬೆಳೆಗಾರರಿಗೆ ನೀಡಿದಂತೆ ದ್ರಾಕ್ಷಿ ಬೆಳೆಗಾರರಿಗೂ ಸರ್ಕಾರ ಬೆಂಬಲ ಬೆಲೆ ನೀಡಬೇಕು. ಬೆಳೆ ಹಾನಿ ಅನುಗುಣವಾಗಿ ಸಾಲ ಮನ್ನಾಗೊಳಿಸಿ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
ಅಭಯಕುಮಾರ ನಾಂದ್ರೇಕರ ಅಧ್ಯಕ್ಷರು, ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss