Saturday, July 2, 2022

Latest Posts

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ಇಬ್ಬರಿಗೆ ಮೂರು ವರ್ಷ ಜೈಲು

 ಹೊಸ ದಿಗಂತ ವರದಿ, ಮಂಡ್ಯ:

ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿಯಲ್ಲಿ ಹರೀಶ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಪ್ರಕರಣದಲ್ಲಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಇಬ್ಬರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
2016ರ ಡಿ.30ರಂದು ಮುರುಕನಹಳ್ಳಿಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಆರೋಪಿಗಳಾದ ಎಂ.ಕೆ.ರಕ್ಷಿತ, ಯೋಗೇಶ, ಗಿರೀಶ್, ರಘು, ಸಂತೋಷ್, ಅಭಿ, ಮಂಜ, ವರುಣ್, ಎಸ್.ಬಿ.ಸಿದ್ದೇಶ್, ಪಿ.ಪರಶುರಾಮ ಹಾಗೂ ಶಿವು ಅವರುಗಳು ಅದೇ ಗ್ರಾಮದ ಹರೀಶ್ ಅಲಿಯಾಸ್ ಗುಂಡ ಎಂಬಾತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸತ್ರನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿಗಳಾದ ಎಂ.ಕೆ.ರಕ್ಷಿತ, ಯೋಗೇಶ, ಸಂತೋಷ್, ಅಭಿ, ಮಂಜ, ಪಿ.ಪರಶುರಾಮ ಹಾಗೂ ಶಿವು ಅವರುಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಉಳಿದ ಆರೋಪಿಗಳಾದ ಗಿರೀಶ ಮತ್ತು ರಘು ಅವರುಗಳಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ.
ಸರ್ಕಾರಿ ಅಭಿಯೋಜಕ ಫಿರೋಜ್‌ಖಾನ್ ಸರ್ಕಾರದ ಪರವಾಗಿ ವಾದಿಸಿದ್ದರು. ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಸಿಪಿಐಗಳಾದ ಎಚ್.ಬಿ.ವೆಂಕಟೇಶಯ್ಯ ಹಾಗೂ ಕೆ.ಪ್ರಭಾಕರ್, ತನಿಖಾ ಸಹಾಯಕರಾದ ಎಎಸ್‌ಐ ಶಿವಣ್ಣ, ಸಿಎಚ್‌ಸಿ ಬಿ.ಎಸ್.ಚಂದ್ರಶೇಖರ್, ವೀದ್ ಮತ್ತಿತರರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಪರಶುರಾಮ ಪ್ರಶಂಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss