ಉಡುಪಿ: ರಾಜ್ಯದ ಎ ವರ್ಗದ ದೇವಾಲಯಗಳಲ್ಲಿ ಒಂದಾದ ಹಾಗೂ ಆದಾಯ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳಕ್ಕೆ ಕೋವಿಡ್ ಲಾಕ್ಡೌನ್ನಿಂದ 3 ತಿಂಗಳಲ್ಲಿ 14 ಕೋಟಿ ರೂ. ಆದಾಯ ಖೋತಾ ಆಗಿದೆ.
ಕೊಲ್ಲೂರು ದೇವಳಕ್ಕೆ 2019ರಲ್ಲಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸುಮಾರು 13 ಕೋಟಿ ರೂ. ಆದಾಯ ಬಂದಿತ್ತು. ಪ್ರತಿ ವರ್ಷವೂ ಆದಾಯದಲ್ಲಿ ಏರಿಕೆಯಾಗುತ್ತಿರುವುದರಿಂದ ಈ ಸಲ 14 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಕೋವಿಡ್ ಸೋಂಕು ಪಸರುವುದನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್ಡೌನ್ ಘೋಷಿಸಿದ ಸಂದರ್ಭದಲ್ಲಿ ದೇವಾಲಯಗಳಿಗೆ ಭಕ್ತರ ಭೇಟಿ, ಸೇವೆ ನಡೆಸುವುದನ್ನು ನಿರ್ಬಂಧಿಸಲಾಗಿತ್ತು. ಇದರಿಂದ ಕೊಲ್ಲೂರು ದೇವಳಕ್ಕೆ ನಿರೀಕ್ಷಿಸಲಾಗಿದ್ದ 14 ಕೋಟಿ ಆದಾಯ ಇಲ್ಲದಾಗಿದೆ.
ಇದೀಗ ದೇವರ ಹುಂಡಿ ಮತ್ತು ಸೇವೆಗಳಿಂದ ಜಮೆ ಆಗದೇ ಕುಸಿದ ಆದಾಯವನ್ನು ಸರಿದೂಗಿಸಲು ರಾಜ್ಯ ಮುಜರಾಯಿ ಇಲಾಖೆ ಭಕ್ತರಿಂದ ಆನ್ಲೈನ್ ಸೇವೆಗಳನ್ನು ಪುನರಾರಂಭಿಸಲು ಮತ್ತು ದೇಣಿಗೆಗಳನ್ನು ನೀಡುವುದಕ್ಕೆ ಅವಕಾಶ ನೀಡಿದೆ. ದೇವಳಕ್ಕೆ ದೇಣಿಗೆ ನೀಡುವ ಭಕ್ತರು ಕೊಲ್ಲೂರಿನ ಸಿಂಡಿಕೇಟ್ (ಕೆನರಾ) ಬ್ಯಾಂಕಿನ ಖಾತೆ (01752200000014, ಐಎಫ್ಎಸ್ಸಿ – ಎಸ್ವೈಎನ್ಬಿ 0000175)ಗೆ ಜಮೆ ಮಾಡಬಹುದು. ಭಕ್ತರು ಸರಿಯಾದ ಅಂಚೆ ವಿಳಾಸವನ್ನು ನೀಡಿದಲ್ಲಿ ಸ್ವೀಕೃತ ರಸೀದಿ ಮತ್ತು ಸೇವಾ ಪ್ರಸಾದವನ್ನು ಅಂಚೆ ಮೂಲಕ ಕಳಿಸಲಾಗುತ್ತದೆ.
ಇನ್ನೂ ದೇವಾಲಯಗಳನ್ನು ಸಾರ್ವಜನಿಕರಿಗೆ ತೆರೆಯಲು ಅನುಮತಿ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಭಕ್ತರು ಆನ್ಲೈನ್ ಮೂಲಕ ಹಣ ಪಾವತಿಸಿ, ದೇವರಿಗೆ ಸೇವೆ ನೀಡಬಹುದಾಗಿದೆ ಎಂದು ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ.